ADVERTISEMENT

ಆಕಸ್ಮಿಕ ಬೆಂಕಿಗೆ ಹುಲ್ಲಿನ ಬಣವೆಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಅರಸೀಕೆರೆ: ರೈತರು ಹಿತ್ತಲಿನಲ್ಲಿ ಕಣಸುಗ್ಗಿ ಮಾಡಿ ಒಟ್ಟಿದ್ದ ರಾಗಿ ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಸುಮಾರು 40 ಗಾಡಿಗಳಿಗೂ ಅಧಿಕ ರಾಗಿ ಹುಲ್ಲು ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಕಡಲಮಗೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಹುಲ್ಲಿನ ಜತೆಗೆ ಹಿತ್ತಲಿನಲ್ಲಿ ಇಡಲಾಗಿದ್ದ ಮರದ ವಸ್ತುಗಳು ಸಹ ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿವೆ. ಕಡಲಮಗೆ ಗ್ರಾಮದ ಮಲ್ಲಪ್ಪ, ರಾಜಪ್ಪ ಎಂಬುವರು ಹಿತ್ತಲಿನಲ್ಲಿ ಸಂಗ್ರಹಿಸಿದ್ದ ರಾಗಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಾಗಿ ಸುಮಾರು 6 ಗಾಡಿ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.

ಇದರ ಪಕ್ಕದಲ್ಲಿಯೇ ಇದ್ದ ರೈತ ಶಂಕರಪ್ಪ ಎಂಬುವರ ಬಣವೆಗೂ ಬೆಂಕಿಯ ಜ್ವಾಲೆ ತಗುಲಿ ಸುಮಾರು 30 ಗಾಡಿ ಬಣವೆ ಸುಟ್ಟು ಹೋಗಿದೆ. ಮಾತ್ರವಲ್ಲದೆ ಸಮೀಪದಲ್ಲೇ ಇದ್ದ ಸಿದ್ದಣ್ಣ ಎಂಬುವರಿಗೆ ಸೇರಿದ ಆರು ಗಾಡಿ ಬಣವೆ ಹಾಗೂ ಗಾಡಿ ನಿಲ್ಲಿಸಲು ಮಾಡಿದ್ದ ಶೆಡ್ ಸಹ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಕರಕಲಾಗಿದೆ.

ಬೆಂಕಿಯನ್ನು ಕಂಡ ಕೂಡಲೇ ಗ್ರಾಮಸ್ಥರು ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಜತೆಗೆ ಬೆಂಕಿಯನ್ನು ನಂದಿಸಲು ನೀರಿಗಾಗಿ ಪರದಾಡಿದರು. ಈ ಗ್ರಾಮದಲ್ಲಿ ಮೊದಲೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಬೆಂಕಿ ನಂದಿಸಲು ನೀರಿಗಾಗಿ ಹರಸಾಹಸಪಟ್ಟರು.

ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಗ್ರಾಮಸ್ಥರೇ ತಾವು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ನೀರನ್ನು ತಂದು ಬೆಂಕಿಗೆ ಸುರಿದು ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾಗಿ `ಪ್ರಜಾವಾಣಿ~ಗೆ ತಿಳಿಸಿದರು.  

ಬೇಸಿಗೆಯ ಬಿರು ಬಿಸಿಲಿನ ಜತೆಗೆ ಸುಳಿ ಗಾಳಿಗೆ ಬೆಂಕಿಯ ಜ್ವಾಲೆ ಹೆಚ್ಚಾಗತೊಡಗಿದಾಗ ಜನರು ಪಕ್ಕದಲ್ಲಿಯೇ ಇದ್ದ ದಲಿತ ಕಾಲೋನಿ ಮನೆಗಳಿಗೆ ಅನಾಹುತ ಸಂಭವಿಸಬಹುದು ಎಂದು ಇಲ್ಲಿನ ಜನರು ಆತಂಕಪಟ್ಟಿದ್ದರು.

ಆ ವೇಳೆಗೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.