ADVERTISEMENT

ಆದಿ ದ್ರಾವಿಡರಿಗೆ ಸಮಾಜ ಭವನ: ಭರವಸೆ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST
ಆದಿ ದ್ರಾವಿಡರಿಗೆ ಸಮಾಜ ಭವನ: ಭರವಸೆ
ಆದಿ ದ್ರಾವಿಡರಿಗೆ ಸಮಾಜ ಭವನ: ಭರವಸೆ   

ಮಂಗಳೂರು: ಆದಿ ದ್ರಾವಿಡರು ಸ್ವಾಭಿಮಾನದ ಬದುಕು ಸಾಗಿಸುವಂತಹ ವ್ಯವಸ್ಥೆ ರೂಪಿಸಬೇಕಿದ್ದು, ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿ ಅವರಿಗಾಗಿ ಸಮಾಜಭವನ ನಿರ್ಮಿಸಲು ಯತ್ನಿಸುವುದಾಗಿ ವಿಧಾನಸಭೆ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಭರವಸೆ ನೀಡಿದ್ದಾರೆ.

ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ಪುರಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ, ಅಶಕ್ತರ ಚಿಕಿತ್ಸೆಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರು, ಬಡವರು ಬಡತನದ ಕಾರಣಕ್ಕಾಗಿ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಬಾರದು. ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲೂ ದಲಿತರು ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಶಾಸಕರಾದ ಯು.ಟಿ.ಖಾದರ್, ಅಭಯಚಂದ್ರ ಜೈನ್ ಇದ್ದರು. ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಸೂಟರ್‌ಪೇಟೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರ ಅಧ್ಯಕ್ಷ ಶ್ರೀಕರ ಪ್ರಭು, ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ಕೆ.ವಾಮನ, ಸಂಘದ ಗೌರವಾಧ್ಯಕ್ಷ ಕೆ.ಶೇಖರ ಬಲ್ಲಾಳ್‌ಬಾಗ್, ಎಸ್‌ಬಿಐ ಅಧಿಕಾರಿ ಅಮ್ಮು ಕುಮಾರ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅರುಣ್ ಫುರ್ಟಾಡೊ ಇತರರು ಇದ್ದರು.

ಬೇಡಿಕೆಗಳು: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಮನವಿ ಕಳುಹಿಸಿಕೊಡಲಾಗಿದ್ದು, ನಗರದಲ್ಲಿ ಆದಿ ದ್ರಾವಿಡರ ಸಮಾಜದ ಸ್ವಂತ ಕಟ್ಟಡಕ್ಕೆ ಸರ್ಕಾರಿ ಭೂಮಿ ಮೀಸಲಿಡಬೇಕು, ಮಕ್ಕಳ ಉನ್ನತ ವಿದ್ಯಾಭ್ಯಾಸದವರೆಗಿನ ಸಂಪೂರ್ಣ ಖರ್ಚನ್ನು ಸರ್ಕಾರ ಹೊತ್ತುಕೊಳ್ಳಬೇಕು, ಆದಿದ್ರಾವಿಡ ಜನಾಂಗದ ಶೋಷಣೆ ತಪ್ಪಿಸಲು ಜಾತಿ ಪ್ರಮಾಣಪತ್ರವನ್ನು ಪರಿಶಿಷ್ಟ ಜಾತಿವಾರು ಪಟ್ಟಿಯಲ್ಲಿರುವಂತೆ ಉಪಜಾತಿ ಆದಿದ್ರಾವಿಡವೆಂದೇ ದಾಖಲಿಸಿ ನೀಡಬೇಕು ಇವೇ ಮೊದಲಾದ ಬೇಡಿಕೆಗಳನ್ನು ಮುಂದಿಡಲಾಯಿತು.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT