ADVERTISEMENT

ಆಲಿಕಲ್ಲು ಮಳೆ; ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಮಂಗಳೂರು: ಪುತ್ತೂರು, ಉಪ್ಪಿನಂಗಡಿ ಸುತ್ತಮುತ್ತ ಸೋಮವಾರ ಸಂಜೆ ಗಾಳಿ, ಗುಡುಗು, ಆಲಿಕಲ್ಲಿನಿಂದ ಕೂಡಿದ ಮಳೆಯಾಗಿದೆ.ಉಪ್ಪಿನಂಗಡಿ ಬಳಿಯ ಪೆರ್ನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ  ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಸಂಜೆ 4ರಿಂದ 5ರ ವರೆಗೆ ಪುತ್ತೂರು ಪಟ್ಟಣದಲ್ಲಿ ಬಿರುಸಿನ ಮಳೆಯಾಯಿತು. ಉಪ್ಪಿನಂಗಡಿ, ಕೊಯಿಲ, ಆಲಂಕಾರು, ನೆಲ್ಯಾಡಿ, ಕಡಬ, ಸವಣೂರು, ತಿಂಗಳಾಡಿ, ಮಾಡಾವು, ಸುಳ್ಯ ಕಡೆಗಳಲ್ಲಿ ಆಲಿಕಲ್ಲಿನಿಂದ ಕೂಡಿದ ಮಳೆ ಸುರಿಯಿತು.

ಕಾರ್ಕಳ ವರದಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಾದ್ಯಂತ ಸೋಮವಾರ ಗುಡುಗು ಸಹಿತ ಮಳೆಯಾಗಿದೆ. ಸುಮಾರು ಒಂದೂವರೆ ಗಂಟೆ ಕಾಲ ತುಂತುರು ಮಳೆ ಜಿನುಗಿತು. ಮಳೆಯ ಕಾರಣ ವಿದ್ಯುತ್ ಕೈಕೊಟ್ಟಿತ್ತು. ಆದರೆ ಎಲ್ಲೂ ಹಾನಿಯಾದ ವರದಿಯಾಗಿಲ್ಲ. ಬೇಸಿಗೆಯ ಧಗೆಯಿಂದ ತತ್ತರಿಸಿದ್ದ ಜನತೆಗೆ ಮಳೆ ತಂಪೆರೆದಿದೆ.

ಕುಂದಾಪುರ ತಾಲ್ಲೂಕಿನ ಬ್ರಹ್ಮಾವರ, ಸುತ್ತಮುತ್ತ ಸೋಮವಾರ ಮಧ್ಯಾಹ್ನ ತುಂತುರು ಮಳೆಯಾಗಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ಬಿಸಿಲಿನ ತಾಪ ಜೋರಾಗಿದ್ದು, ಮಳೆಯ ನಿರೀಕ್ಷೆಯಿತ್ತು.

 ಚಿಕ್ಕಮಗಳೂರು ವರದಿ: ಚಿಕ್ಕಮಗಳೂರು ಜಿಲ್ಲೆಯ ಕಳಸ, ಬಾಳೆಹೊನ್ನೂರು ಪರಿಸರದಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಕಡೂರು ವರದಿ: ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶವಾದ ಎಮ್ಮೆದೊಡ್ಡಿಯ ಗಾಂಧಿನಗರ, ಶ್ರೀರಾಂಪುರ, ಬೆಳ್ಳಿಗುತ್ತಿ, ರಂಗೇನಹಳ್ಳಿ, ಮುಸ್ಲಾಪುರಹಟ್ಟಿ, ಗೋಪಾಲಪುರ ಸೇರಿದಂತೆ ಉಳಿದ 24 ಹಳ್ಳಿಗಳಲ್ಲಿ ಶನಿವಾರ ಸಂಜೆ ಸುರಿದ ರೇವತಿ ಮಳೆಯ ಅರ್ಭಟಕ್ಕೆ ಫಸಲಿಗೆ ಬಂದಿದ್ದ ಬಾಳೆ, ಅಡಿಕೆ ನೆಲಕ್ಕುರುಳಿ ಕೋಟಿಗಟ್ಟಲೆ ನಷ್ಟವಾಗಿ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.