ADVERTISEMENT

`ಆಶ್ರಯ ಮನೆಗಳ ದುರುಪಯೋಗ ಬೇಡ'

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಹೊಳೆನರಸೀಪುರ: ಆಶ್ರಯ ಯೋಜನೆಯಲ್ಲಿ ನೀಡಿದ ಮನೆಗಳನ್ನು ಜನರು ಬಾಡಿಗೆಗೆ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು, ಜಿಲ್ಲಾಧಿಕಾರಿ ನೇತೃತ್ವದ ತಂಡದಿಂದ ಶೀಘ್ರದಲ್ಲಿಯೇ ತನಿಖೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಆಶ್ರಯ ಹಾಗೂ ಕೊಳಚೆ ನಿರ್ಮೂಲನ ಮಂಡಳಿ ನೀಡಿರುವ ಮನೆಗಳನ್ನು ಬಾಡಿಗೆ ನೀಡಬಾರದು ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದರು.

ಭಾನುವಾರ ಆಶ್ರಯ ಮತ್ತು ಸ್ಲಂ ಬಡಾವಣೆ ಜನರಿಗೆ ಆಶ್ರಯ ನಿವೇಶನಗಳ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದ ಅವರು ಇಲ್ಲಿನ ಜನರಿಗೆ ಆಶ್ರಯ ಯೋಜನೆಯಲ್ಲಿ 1425 ನಿವೇಶನ ಮತ್ತು ಕೊಳಚೆ ನಿರ್ಮಲನಾ ಮಂಡಳಿಯಿಂದ ರೂ. 1.35 ಲಕ್ಷದ 725 ಮನೆಗಳನ್ನು ನೀಡಿದ್ದೆವು. ಆದರೆ, ಅವುಗಳನ್ನು ಪಡೆದುಕೊಂಡ ಕೆಲವರು ಬಾಡಿಗೆಗೆ ನೀಡಿರುವುದು ಸರಿಯಲ್ಲ ಎಂದರು.

`ನಮ್ಮೂರಲ್ಲಿ ಯಾರೂ ವಸತಿ ರಹಿತರು ಇರಬಾರದು. ಎಲ್ಲರಿಗೂ ಮನೆಗಳಿರಬೇಕು ಎನ್ನುವ ಉದ್ದೇಶದಿಂದ ಹಾಗೂ ರಾಜ್ಯದ ಬಡಜನರಿಗೆ ಮನೆ ಒದಗಿಸಿಕೊಡುವ ಸಲುವಾಗಿಯೇ ಹಿಂದೆ ದೇವೇಗೌಡರು ನನಗೆ ವಸತಿ ಖಾತೆ ನೀಡಿದ್ದರು' ಎಂದರು.ಸರ್ಕಾರ ರಾಜ್ಯದ ಎಲ್ಲ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಬೇಕು.

ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಪುರಸಭೆಗೆ ಕಳುಹಿಸುವ ಏಜೆನ್ಸಿಯವರು ಕಾರ್ಮಿಕರಿಗೆ ಕಡಿಮೆ ಹಣ ನೀಡಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದನ್ನು ತಪ್ಪಿಸಬೇಕು ಎಂದರು.ಪುರಸಭೆ ಅಧ್ಯಕ್ಷೆ ವಿನೋದಾ, ತಹಶೀಲ್ದಾರ್ ಹಾಗೂ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಈಶ್ವರಪ್ಪ, ಆಶ್ರಯ ಸಮಿತಿಯ ಸದಸ್ಯರಾದ ಲಕ್ಷ್ಮಣ, ಪಿರಾಂಬಿ, ಮೈಲಾರಯ್ಯ, ತಾ.ಪಂ ಸದಸ್ಯ ಸಿ.ಆರ್. ಮಂಜುನಾಥ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.