ADVERTISEMENT

ಇಂದು ಐಟಿಐ ಪರೀಕ್ಷೆ : 2 ಪ್ರಶ್ನೆ ಪತ್ರಿಕೆಗಳು ಬಹಿರಂಗ?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಹಾವೇರಿ: ಶುಕ್ರವಾರ (ಆ.3) ನಡೆಯಲಿರುವ ಐಟಿಐ ಪರೀಕ್ಷೆಯ  ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿವೆ ಎಂಬ ವದಂತಿ ನಗರದಲ್ಲಿ ಗುರುವಾರ ಹರಡಿತ್ತು.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ದೇಶದಾದ್ಯಂತ ನಡೆಯಲಿರುವ ಎಲೆಕ್ಟ್ರಿಷಿಯನ್ ಹಾಗೂ ಫಿಟ್ಟರ್ ವಿಷಯಗಳ ಪ್ರಶ್ನೆ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳು ನಗರದಲ್ಲಿ  ದೊರೆಯುತ್ತಿವೆ. ಜಿಲ್ಲೆಯಾದ್ಯಂತ ಈಗಾಗಲೇ ವಿದ್ಯಾರ್ಥಿಗಳ ಕೈಯಲ್ಲಿ ಹರಿದಾಡುತ್ತಿರುವ ಈ ಪ್ರಶ್ನೆ ಪತ್ರಿಕೆಗಳ ಪ್ರತಿಗಳು ನಿಜವಾದವೋ ಅಥವಾ ಸುಳ್ಳೋ ಎಂಬುದು ಗೊತ್ತಾಗದೇ ಪರೀಕ್ಷೆ ನಡೆಸುವ ಅಧಿಕಾರಿಗಳು ಹಾಗೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಗೊಂದಲದಲ್ಲಿ ಮುಳುಗಿದ್ದಾರೆ.

`ಪ್ರಶ್ನೆ ಪತ್ರಿಕೆಯಲ್ಲಿ ವಿಷಯ ಹಾಗೂ ಸಮಯ ಬಿಟ್ಟು ಬೇರೆನೂ ನಮೂದಿಸಿರುವುದಿಲ್ಲ. ಪರೀಕ್ಷೆ ನಡೆಯುವ ದಿನಾಂಕ ಕೂಡಾ ಅದರಲ್ಲಿ ಇರುವುದಿಲ್ಲ. ವಿಷಯದ ಕೋಡ್ ಸಂಖ್ಯೆ ಮಾತ್ರ ಅದರ ಮೇಲೆ ನಮೂದಿಸಲಾಗಿರುತ್ತದೆ. ಅದರಂತೆ ಫಿಟ್ಟರ್ ವಿಷಯಕ್ಕೆ 4 ಹಾಗೂ ಎಲೆಕ್ಟ್ರಿಷಿಯನ್ ವಿಷಯಕ್ಕೆ 16 ಎಂದು ಕೋಡ್ ಇದ್ದು, ಅವೆರಡು ಆ ವಿಷಯಗಳ ಕೋಡ್‌ಗಳಾಗಿವೆ~ ಎಂದು ನಗರದ ಆದರ್ಶ ಐಟಿಐ ಕಾಲೇಜಿನ ಪ್ರಾಚಾರ್ಯ ಭಾಷಾ ಮಸೂತಿ ಖಚಿತಪಡಿಸಿದ್ದಾರೆ.

`ನ್ಯಾಷನಲ್ ಕೌನ್ಸಿಲ್ ಫಾರ್ ವೆಕೆಷನ್ ಟ್ರೇನಿಂಗ್ (ಎನ್‌ಸಿವಿಟಿ) ಮೂಲಕ ಐಟಿಐ ಪರೀಕ್ಷೆಗಳು ದೇಶಾದ್ಯಂತ ಏಕಕಾಲಕ್ಕೆ ನಡೆಯುತ್ತವೆ. ಪರೀಕ್ಷೆಗೂ ಒಂದು ವಾರ ಮುನ್ನ ಆಯಾ ಜಿಲ್ಲಾ ಖಜಾನೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕಳುಹಿಸುತ್ತಾರೆ. ಜಿಲ್ಲಾ ಖಜಾನೆಗಳಲ್ಲಿ ಭದ್ರವಾಗಿ ಇವುಗಳನ್ನು ಇಟ್ಟಿರಲಾಗುತ್ತದೆ.

ಪರೀಕ್ಷೆಗೆ ಅರ್ಧ ಗಂಟೆ ಮೊದಲು ಖಜಾನೆ ಅಧಿಕಾರಿಗಳೇ ಪರೀಕ್ಷಾ ಕೇಂದ್ರಗಳಿಗೆ ಅವನ್ನು ತಲುಪಿಸುವ ವ್ಯವಸ್ಥೆಯಿದೆ~ ಎನ್ನುತ್ತಾರೆ ಅವರು.

ಜಿಲ್ಲಾ ಖಜಾನೆಯಲ್ಲಿ ಭದ್ರ: ಪ್ರಶ್ನೆ ಪತ್ರಿಕೆಗಳು ಜಿಲ್ಲಾ ಖಜಾನೆಯಲ್ಲಿ ಸುರಕ್ಷಿತವಾಗಿವೆ. ಈಗ ಹೊರಗಡೆ ದೊರೆತಿರುವ ಜೆರಾಕ್ಸ್ ಪ್ರತಿಗಳು ನಿಜವಾದ ಪ್ರಶ್ನೆ ಪತ್ರಿಕೆಗಳೋ, ಅಲ್ಲವೋ ಎಂಬುದನ್ನು ಹೇಳಲಾಗದು. ಒಂದು ವೇಳೆ ಅವುಗಳು ಶುಕ್ರವಾರದ ಪ್ರಶ್ನೆಪತ್ರಿಕೆಗಳೇ ಆಗಿದ್ದರೆ, ಬೇರೆ ಜಿಲ್ಲೆಯಿಂದ ಬಂದಿರುವ ಸಾಧ್ಯತೆಯಿದೆಯೇ ಹೊರತು ಹಾವೇರಿ ಜಿಲ್ಲೆಯಲ್ಲಿ ಬಹಿರಂಗಗೊಂಡವಲ್ಲ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಸ್ಪಷ್ಟಪಡಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.