ADVERTISEMENT

ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಕೊಪ್ಪಳ: ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಈ ಭಾಗದ ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಶಾಸಕ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.

ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಮಂಗಳವಾರ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿದ್ದ ಜಿಲ್ಲಾ ಬಂದ್ ಅಂಗವಾಗಿ ಹಮ್ಮಿಕೊಂಡಿದ್ದ ರ‌್ಯಾಲಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದ ಇತರ ಭಾಗಗಳಿಗಿಂತ ಹೈದರಾಬಾದ್ ಕರ್ನಾಟಕ ಪ್ರದೇಶ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಹೈದರಾಬಾದ್ ಸಂಸ್ಥಾನದಲ್ಲಿ ಜಾರಿಯಲ್ಲಿದ್ದ ಮುಲ್ಕಿ ಕಾನೂನನ್ನು ಇನ್ನೂ ಮುಂದುವರಿಸಿದ್ದರೆ ಈ ಭಾಗದ ಸ್ಥಿತಿ ಇಷ್ಟೊಂದು ಕೆಟ್ಟದಾಗಿ ಇರುತ್ತಿರಲಿಲ್ಲ ಎಂದು ಹೇಳಿದರು.

ಸಂವಿಧಾನದ ತಿದ್ದುಪಡಿಗಾಗಿ ನಡೆಯುತ್ತಿರುವ ಹೋರಾಟ ನಿರೀಕ್ಷಿತ ಫಲ ನೀಡದೇ ಇರುವುದಕ್ಕೆ ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದರು.

ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಲ್ಲಮಪ್ರಭು ಬೆಟ್ಟದೂರು, ಸ್ವಾಭಿಮಾನ ಇಲ್ಲದೇ ನಡೆಸುವ ಹೋರಾಟ ಫಲ ನೀಡುವುದಿಲ್ಲ ಎಂದರು. ವಕೀಲ ಆರ್.ಬಿ.ಪಾನಘಂಟಿ, ಈ ಭಾಗದ ಸಂಸದರು  ಸಂಸತ್ ಭವನದ ಮುಂದೆ ಧರಣಿ ನಡೆಸಬೇಕು ಎಂದರು. ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಂಸದ ಶಿವರಾಮಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ಜೆಡಿಎಸ್ ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ, ಕೆ.ಎಂ.ಸೈಯದ್, ವೀರೇಶ ಮಹಾಂತಯ್ಯನಮಠ, ಉತ್ತರ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಡಾ.ಎಸ್.ಆರ್.ಸ್ವಾಮಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.