ADVERTISEMENT

ಉಜ್ಜಯನಿ ಪೀಠಕ್ಕೆ ನೇಮಕ: ಸಂಪ್ರದಾಯ ಪಾಲನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಗುಲ್ಬರ್ಗ: ವೀರಶೈವ ಪಂಚ ಪೀಠಗಳಲ್ಲಿ ಒಂದಾಗಿರುವ ಉಜ್ಜಯನಿ ಸದ್ಧರ್ಮ ಪೀಠದ ಉತ್ತರಾಧಿಕಾರಿಯನ್ನು ಪಂಚ ಪೀಠಗಳ ಸಂಪ್ರದಾಯ ಹಾಗೂ ಪರಂಪರೆಯ ಆಧಾರದಲ್ಲಿ ನೇಮಿಸಬೇಕು ಎಂದು ಹೈದರಾಬಾದ್ ಕರ್ನಾಟಕದ ಶಿವಾಚಾರ್ಯರು ಒತ್ತಾಯಿಸಿದ್ದಾರೆ.

ಪಂಚ ಪೀಠವೊಂದರ ಉತ್ತರಾಧಿಕಾರಿಯನ್ನು ಉಳಿದ ನಾಲ್ಕು ಜಗದ್ಗುರುಗಳು, ಶಿವಾಚಾರ್ಯರು, ಭಕ್ತರು ಸಭೆ ಸೇರಿ ಆರಿಸುತ್ತಾರೆ. ಸರ್ವಸಮ್ಮತಿ ಪಡೆದವರು ಜಗದ್ಗುರುಗಳಾಗಿ ಪೀಠ ಹಾಗೂ ವೀರಶೈವರನ್ನು ಮುನ್ನಡೆಸುತ್ತಾರೆ. ಇದು ನಡೆದುಕೊಂಡು ಬಂದ ಪರಂಪರೆ.

ಇದನ್ನು ಮುರಿದು ವಂಶಸ್ಥರು, ಉಯಿಲು ಬರೆದಿಟ್ಟು, ಮೂರು ಪೀಠಗಳನ್ನು ನಿರ್ಲಕ್ಷಿಸಿ (ಕಾಶಿ, ರಂಭಾಪುರಿ, ಕೇದಾರ ಜಗದ್ಗುರುಗಳು) ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಯಾವುದೇ ವ್ಯಕ್ತಿಯ ಆಯ್ಕೆಗೆ ವಿರೋಧವಿಲ್ಲ. ಈಗ ನಡೆದಿರುವ ಆಯ್ಕೆ ಪ್ರಕ್ರಿಯೆಗೆ ನಮ್ಮ ವಿರೋಧವಿದೆ. ಇದನ್ನು ಖಂಡಿಸುತ್ತೇವೆ. ಇದನ್ನು ಮೀರಿ ನವೆಂಬರ್ 3ರಂದು ಪಟ್ಟಾಧಿಕಾರ ನಡೆದರೆ ಮುಂದಿನ ದಿನಗಳಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸರಡಗಿ ರೇವಣಸಿದ್ಧ ಶಿವಾಚಾರ್ಯ, ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯ, ರಾಜೇಶ್ವರ ಶಿವಾಚಾರ್ಯ, ಜಯಶಾಂತಲಿಂಗ ಶಿವಾಚಾರ್ಯ, ಶಿವಮೂರ್ತಿ ಶಿವಾಚಾರ್ಯ ಸೇರಿದಂತೆ ಹೈದರಾಬಾದ್ ಕರ್ನಾಟಕದ 20ಕ್ಕೂ ಹೆಚ್ಚು ಶಿವಾಚಾರ್ಯರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.