ADVERTISEMENT

ಉತ್ತಮ ಪರಿಸರ ನಿರ್ಮಿಸಲು ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಚಿಕ್ಕಮಗಳೂರು: `ಒತ್ತಡದ ಬದುಕಿನಿಂದ ಹೊರಬಂದು ಉತ್ತಮ ಪರಿಸರದ ಪ್ರಶಾಂತ ವಾತಾವರಣದಲ್ಲಿ ಜೀವನ ನಡೆಸುವುದು ಅಗತ್ಯ. ಒಳ್ಳೆಯ ಪರಿಸರ ನಿರ್ಮಾಣ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಅರಣ್ಯ ಇಲಾಖೆ ಮತ್ತು ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ನಡೆಯುತ್ತಿರುವ 57ನೇ ವನ್ಯಜೀವಿ ಸಪ್ತಾಹ ಅಂಗವಾಗಿ ನಗರದ ನೇತಾಜಿ ಸುಭಾಷ್‌ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

`ಇತ್ತೀಚಿನ ದಿನಗಳಲ್ಲಿ ಜನರು ಯಾಂತ್ರಿಕ ಬದುಕಿಗೆ ಮಾರುಹೋಗಿದ್ದಾರೆ. ಹಲವು ಕಾಯಿಲೆಗಳು ಬರಲು ಇದು ಕಾರಣವಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಬೇಕು ಎಂದು ಅವರು ಹೇಳಿದರು.

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಾಂವ್ಕರ್ ಮಾತನಾಡಿ, ಗಿಡ, ಮರ, ಸಸ್ಯಸಂಕುಲ ಮತ್ತು ಪ್ರಾಣಿ ಪಕ್ಷಿಗಳ ಸಂರಕ್ಷಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅರಣ್ಯಾಧಿಕಾರಿ ಅವತಾರ್‌ಸಿಂಗ್, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ.ಗಿರೀಶ್, ಪರಿಸರ ಸಂಘಟನೆಗಳ ಮುಖಂಡರಾದ ಶ್ರೀದೇವ್‌ಹುಲಿಕೆರೆ, ವೀರೇಶ್, ಘನಶ್ಯಾಮ್, ಅಮಿತ್, ರಾಜೀವ್, ಸಹಾಯಕ ಅರಣ್ಯ ಸಂರಕ್ಷಭಣಾಧಿಕಾರಿಗಳಾದ ರಮೇಶ್‌ಬಾಬು, ಶಂಕರ್, ವಲಯ ಅರಣ್ಯಾಧಿಕಾರಿ ಮೋಹನ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.