ADVERTISEMENT

ಉಸ್ತುವಾರಿ ಸಚಿವರಿಗೆ ಸಂತ್ರಸ್ತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST
ಉಸ್ತುವಾರಿ ಸಚಿವರಿಗೆ ಸಂತ್ರಸ್ತರ ಮುತ್ತಿಗೆ
ಉಸ್ತುವಾರಿ ಸಚಿವರಿಗೆ ಸಂತ್ರಸ್ತರ ಮುತ್ತಿಗೆ   

ದಾವಣಗೆರೆ: ನಗರದ ಚಿಕ್ಕನಹಳ್ಳಿ ಬಡಾವಣೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ 267 ಗುಡಿಸಲುಗಳು ಸುಟ್ಟುಹೋದ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ಸಂತ್ರಸ್ತರು ದಿಗ್ಬಂಧನ ಹಾಕಿ, ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಸಂಜೆ ಈ ಸ್ಥಳಕ್ಕೆ ಪರಿಶೀಲನೆಗೆ ಸಚಿವರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವೀರೇಶ್ ಹನಗವಾಡಿ, ಮೇಯರ್ ಎಚ್.ಎನ್. ಗುರುನಾಥ್ ಇತರರು ಭೇಟಿ ನೀಡಿದರು. ಅವರು ಕಾರಿನಿಂದ ಇಳಿದ ಕೂಡಲೇ ಸುತ್ತುವರಿದ ಸಂತ್ರಸ್ತರು ಏರಿದ ಧ್ವನಿಯಲ್ಲಿ ತಮ್ಮ ನೋವು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಲ್ಲಿನ ನಿವಾಸಿಗಳಿಗೆ ಬೇರೆ ಕಡೆ ಆಶ್ರಯ ಕಲ್ಪಿಸುವ ವ್ಯವಸ್ಥೆ ಮಾಡಬಹುದು. ಇಲ್ಲಿನ ಸ್ಥಳದಲ್ಲಿ ಕಾನೂನು ಸಂಬಂಧಿ ಸಮಸ್ಯೆಯಿದೆ ಎಂದು ಹೇಳಿದರು.

ಇದರಿಂದ ಕೋಪಗೊಂಡ ಸಂತ್ರಸ್ತರು, ಈ ಜಾಗದಲ್ಲಿ ದಲಿತರು ಗುಡಿಸಲು ಹಾಕಿಕೊಂಡು ಹಲವಾರು ವರ್ಷಗಳಿಂದ ಇದ್ದಾರೆ. ಇದೀಗ ಅಲ್ಲಿ ಶಾಶ್ವತ ಮನೆ ಕಟ್ಟದಂತೆ ನ್ಯಾಯಾಲಯದಿಂದ ಎಪಿಎಂಸಿ ಅಧಿಕಾರಿಗಳು ತಡೆಯಾಜ್ಞೆ ತಂದಿದ್ದಾರೆ. ಇಲ್ಲಿ ತಮಗೆ ಹಕ್ಕುಪತ್ರ ನೀಡಿದರೆ ಸಮಸ್ಯೆ ಏನು? ಎಂದು ಪ್ರಶ್ನಿಸಿದರು.

ಮುಂದೆ ಸಚಿವರ ಉತ್ತರಕ್ಕೂ ಕಾಯದ ಸಂತ್ರಸ್ತರು ನಿಮ್ಮ ಹುಸಿ ಭರವಸೆ ಬೇಡ. ದುರಂತ ಸಂಭವಿಸಿದಾಗ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರಿಗೆ ಅಡ್ಡಗಟ್ಟಿದರು. ಸಚಿವರು, ಪೊಲೀಸರು ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಯಿತು. ಕೊನೆಗೆ ಗುಂಪಿನ ನಡುವೆ ಮೆಲ್ಲನೆ ಹೊರಬಂದ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಚರ್ಚಿಸೋಣ ಎಂದರು. ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯತ್ತ ಧಾವಿಸಿದರು. ಇದೇ ವೇಳೆಗೆ ಇಬ್ಬರು ಎಪಿಎಂಸಿ ಸಿಬ್ಬಂದಿಗೆ ನಿರಾಶ್ರಿತರು ಮುತ್ತಿಗೆ ಹಾಕಿದರು. ತಕ್ಷಣವೇ ಕೆಎಸ್‌ಆರ್‌ಪಿ ತುಕಡಿ ಸ್ಥಳಕ್ಕೆ ಆಗಮಿಸಿತು. ರಾತ್ರಿವರೆಗೂ ಧರಣಿ ನಡೆಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.