ADVERTISEMENT

ಎಐಐಎಂಎಸ್ ಪ್ರವೇಶ ಪರೀಕ್ಷೆ ಮದ್ದೂರು ಯುವಕನಿಗೆ 3ನೇ ರ‌್ಯಾಂಕ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ಮದ್ದೂರು: ಬಡತನದ ನಡುವೆ ವೈದ್ಯಕೀಯ ಶಿಕ್ಷಣ ಯಶಸ್ವಿಯಾಗಿ ಪೂರ್ಣಗೊಳಿಸಿದ ತಾಲ್ಲೂಕಿನ ಕದಲೂರು ಗ್ರಾಮದ ಕೆ.ಟಿ.ಪುನೀತ್, ಕಳೆದು ತಿಂಗಳು ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ಪ್ರವೇಶಕ್ಕಾಗಿ ಎಐಐಎಂಎಸ್ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 3ನೇ ರ‌್ಯಾಂಕ್ ಪಡೆದು ಕರ್ನಾಟಕದ ಕೀರ್ತಿಗೆ ಗರಿ ಮೂಡಿಸಿದ್ದಾನೆ.

ಕರ್ನಾಟಕದ 50 ವರ್ಷಗಳ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆ.ಟಿ.ಪುನೀತ್ ಪ್ರವೇಶ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗ (ಜನರಲ್ ಮೆರಿಟ್)ದಲ್ಲಿ 3ನೇ ರ‌್ಯಾಂಕ್ ದಾಖಲಿಸಿದ್ದು, ಹಿಂದುಳಿದ ವರ್ಗ(ಓ.ಬಿ.ಸಿ) ವಿಭಾಗದಲ್ಲಿ ಮೊದಲ ರ‌್ಯಾಂಕ್ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.

ಸಾಧನೆಯ ಹಾದಿ: ತಾಲ್ಲೂಕಿನ ಕದಲೂರು ಎಂಬ ಕುಗ್ರಾಮದ ತಿಮ್ಮೇಗೌಡ ಹಾಗೂ ಜಯಶೀಲ ದಂಪತಿ ಪುತ್ರನಾದ ಪುನೀತ್ ತಮ್ಮೂರಿನ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಇವರು,  ನಂತರ ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಪಿಯು ವಿಜ್ಞಾನ ವಿಭಾಗಕ್ಕೆ ಸೇರಿದರು.

ತಮ್ಮೂರಿನಿಂದ ಇನ್ನೊಬ್ಬರಿಂದ ಎರವಲು ಪಡೆದ ಹಳೇ ಸೈಕಲ್‌ನಲ್ಲಿ ಪ್ರತಿನಿತ್ಯ 10 ಕಿ.ಮೀ ಕಾಲೇಜಿಗೆ ಬಂದು, ಯಾವುದೇ ಮನೆಪಾಠದ ಹಂಗಿಲ್ಲದೇ ಉಪನ್ಯಾಸಕರ ಮಾರ್ಗದರ್ಶನದಲ್ಲಿ 2004- 05ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.98ರಷ್ಟು (ಭೌತಶಾಸ್ತ್ರ-99, ರಸಾಯನಶಾಸ್ತ್ರ-98, ಗಣಿತ-98, ಜೀವಶಾಸ್ತ್ರ-96) ಅಂಕ ಪಡೆದರು.

ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್ ಗಳಿಸಿದ ಪುನೀತ್ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರು ಮೆಡಿಕಲ್ ಕಾಲೇಜನ್ನು. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆ ನಿಡಘಟ್ಟದ ವಿಜಯ ಬ್ಯಾಂಕ್‌ನಲ್ಲಿ ಶಿಕ್ಷಣ ಸಾಲ ಪಡೆದು ಆ ಹಣದಲ್ಲಿಯೇ 2011ರ ಫೆಬ್ರವರಿಯಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದರು.

ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ನಂತರ ಸ್ನಾತಕೋತ್ತರ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಕನಿಷ್ಠ ಒಂದು ವರ್ಷವಾದರೂ ಅಧ್ಯಯನಶೀಲರಾಗುವುದು ವಾಡಿಕೆ. ಆದರೆ ಕೇವಲ ಮೂರು ತಿಂಗಳಿನಲ್ಲಿ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದ ಪುನೀತ್, ಇದೀಗ ಎಐಐಎಂಎಸ್(ಆಲ್  ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ನಡೆಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 3ನೇ ರ‌್ಯಾಂಕ್ ದಾಖಲಿಸಿದ್ದಾನೆ.

`ಉಪನ್ಯಾಸಕರ ಮಾರ್ಗದರ್ಶನ, ನಿರಂತರ ಅಭ್ಯಾಸ ಹಾಗೂ ಸಾಧಿಸುವ ಛಲ ಈ ಸಾಧನೆಗೆ ಪ್ರೇರೇಪಿಸಿದೆ. ವೈದ್ಯನಾಗಿ ಗ್ರಾಮೀಣ ಜನರ ಸೇವೆ ಮಾಡಬೇಕು  ಎಂಬುದೇ ನನ್ನ ಗುರಿ~ ಎಂದು ಪುನೀತ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.