ADVERTISEMENT

ಎಚ್.ಎನ್. ನಂಜೇಗೌಡರ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2012, 19:30 IST
Last Updated 28 ಏಪ್ರಿಲ್ 2012, 19:30 IST
ಎಚ್.ಎನ್. ನಂಜೇಗೌಡರ ಪುತ್ಥಳಿ ಅನಾವರಣ
ಎಚ್.ಎನ್. ನಂಜೇಗೌಡರ ಪುತ್ಥಳಿ ಅನಾವರಣ   

ಅರಕಲಗೂಡು: `ರಾಜ್ಯ ಕಂಡ ಅಪರೂಪದ ರಾಜಕಾರಣಿ ಎಚ್.ಎನ್. ನಂಜೇಗೌಡ ಅವರು ನೀರಾವರಿ ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ಧಿಯ ಕನಸು ಕಂಡಿದ್ದರು~ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.

ಪಟ್ಟಣದ ನಾಗರಿಕ ವೇದಿಕೆ ವತಿಯಿಂದ ನಿರ್ಮಿಸಲಾದ ಎಚ್.ಎನ್. ನಂಜೇಗೌಡರ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಸಮೃದ್ಧವಾದ ನೀರು ಲಭ್ಯತೆ ಇದ್ದರೂ ಅದರ ಸಮರ್ಪಕ ಬಳಕೆ ಆಗುತ್ತಿಲ್ಲ. ರಾಜಕಾರಣಿಗಳ ಆಸಕ್ತಿಯ ಕೊರತೆಯಿಂದ ರಾಜ್ಯ ಪದೆ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ನೆರೆ ರಾಜ್ಯಗಳು ತಮ್ಮ ಪಾಲಿನ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಕರ್ನಾಟಕ ಮಾತ್ರ ಈ ವಿಚಾರದಲ್ಲಿ ಹಿಂದುಳಿದಿದೆ.

ಆಂಧ್ರಪ್ರದೇಶ ಶೇ 62, ತಮಿಳುನಾಡು ಶೇ 58 ಹಾಗೂ ಮಹಾರಾಷ್ಟ್ರ ಶೇ 60 ರಷ್ಟು ನೀರಾವರಿ ಪ್ರದೇಶ ಹೊಂದಿವೆ. ಆದರೆ ಕರ್ನಾಟಕದ ಪಾಲು ಶೇ 30ರಷ್ಟು ಆಗಿದೆ. ಕೃಷ್ಣಾ, ಕಾವೇರಿ ನೀರಿನಲ್ಲಿ ಇನ್ನೂ 130 ಟಿಎಂಸಿ ನೀರು ಬಳಸಿಕೊಳ್ಳಲು ಸಾಧ್ಯವಾಗದೆ ವ್ಯರ್ಥವಾಗಿ ಹರಿದು ಹೋಗುತ್ತಿದೆ~ ಎಂದರು.

ರೈತ ಮುಖಂಡ ಚಂದ್ರಶೇಖರ್ ಮಾತನಾಡಿ, `ಕಾವೇರಿ ನೀರಿಗಾಗಿ ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಈ ರೀತಿಯ ಸಂದರ್ಭದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ನಂಜೇಗೌಡ ಅವರಿಗೆ ಇದ್ದ ಅಪಾರ ಜ್ಞಾನ ನಮ್ಮ ನೆರವಿಗೆ ಬರುತ್ತಿತ್ತು~ ಎಂದರು.

ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದ ನಿರ್ಮಲಾನಂದ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ನಂಜೇಗೌಡರ ಪತ್ನಿ ಕಮಲಮ್ಮ, ನಾಗರಿಕ ವೇದಿಕೆ ಅಧ್ಯಕ್ಷ ಎಚ್. ಯೋಗಾ ರಮೇಶ್, ಮಾಜಿ ಶಾಸಕ ಡಿ.ಸಿ. ತಮ್ಮಣ್ಣ, ಬಿಬಿಎಂಪಿ ಮಾಜಿ ಸದಸ್ಯ ಹುಚ್ಚಯ್ಯ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.