ADVERTISEMENT

ಎರಡು ರೂಪಾಯಿಗೆ ಕುಸಿದ ಟೊಮೆಟೊ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 5:23 IST
Last Updated 26 ಡಿಸೆಂಬರ್ 2017, 5:23 IST
ಎರಡು ರೂಪಾಯಿಗೆ ಕುಸಿದ ಟೊಮೆಟೊ
ಎರಡು ರೂಪಾಯಿಗೆ ಕುಸಿದ ಟೊಮೆಟೊ   

ಮೈಸೂರು: ಈ ಬಾರಿಯಂತೂ ಟೊಮೆಟೊ ವರ್ಷದ ಕನಿಷ್ಠ ದರಕ್ಕೆ ಕುಸಿದಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಡಿ.21ರಂದು ಇದರ ಸಗಟು ಧಾರಣೆ ಕನಿಷ್ಠ ₹ 2ಕ್ಕೆ ಕುಸಿದಿತ್ತು. ಗರಿಷ್ಠ ಧಾರಣೆ ₹ 3ರಲ್ಲಿತ್ತು. ಅಂದು 3,016 ಕ್ವಿಂಟಲ್‌ನಷ್ಟು ಮಾರಾಟಕ್ಕೆ ತಂದಿದ್ದ ರೈತರು ಬೆಲೆಯನ್ನು ನೋಡಿ ಕಂಗಾಲಾದರು.

‘ಕನಿಷ್ಠ ಸಾಗಾಣಿಕೆ ವೆಚ್ಚವೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ವೆಚ್ಚ ಸೇರಿದರೆ ಮಾರುಕಟ್ಟೆಗೆ ತರುವುದೇ ಬೇಡ ಎನ್ನುವಂತಾಗಿದೆ. ಡಿಸೆಂಬರ್ ತಿಂಗಳಿನಾದ್ಯಂತ ಬೆಲೆ ಇದೇ ರೀತಿ ಇದೆ. ರೈತ ಸಂಘಟನೆಗಳಾಗಲಿ, ಸರ್ಕಾರವಾಗಲಿ ಈ ಕುರಿತು ಗಮನ ಹರಿಸುತ್ತಿಲ್ಲ’ ಎಂದು ಎಂ.ಜಿ.ರಸ್ತೆ ಮಾರುಕಟ್ಟೆಗೆ ಕಡಕೊಳದಿಂದ ಟೊಮೆಟೊ ತಂದಿದ್ದ ಚಲುವೇಗೌಡ ಬೇಸರ ವ್ಯಕ್ತಪಡಿಸಿದರು.

‘ಎಪಿಎಂಸಿಯ ದರ ಕಂಡು ಇಲ್ಲಿಗೆ ಬಂದೆ. ಇಲ್ಲೂ ₹ 4ಕ್ಕಿಂತ ಹೆಚ್ಚಿಗೆ ಯಾರೂ ಕೇಳುತ್ತಿಲ್ಲ. ತಂದಿರುವ ಎಲ್ಲ ಟೊಮೆಟೊವನ್ನು ಖರೀದಿಸುವವರೂ ಇಲ್ಲ. ಏನು ಮಾಡುವುದು ಎಂದು ದಿಕ್ಕು ತೋಚದಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ADVERTISEMENT

ಕಳೆದ ಕೆಲ ತಿಂಗಳ ಹಿಂದೆ ಟೊಮೆಟೊ ದರ ₹ 50ರ ಗಡಿ ತಲುಪಿದ್ದನ್ನು ಕಂಡ ರೈತರು ಹೆಚ್ಚಾಗಿ ಟೊಮೆಟೊವನ್ನೇ ಬೆಳೆದಿದ್ದಾರೆ. ಈಗ ಎಲ್ಲೆಡೆ ಸಮೃದ್ಧ ಫಸಲು ಕೈಸೇರಿದೆ. ಇದಕ್ಕೆ ಪೂರಕವಾಗಿ ಕೇರಳ ವ್ಯಾಪಾರಸ್ಥರಿಂದಲೂ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿಲ್ಲ. ಶುಭ ಸಮಾರಂಭಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ನಗರದಲ್ಲೂ ಹೆಚ್ಚಿನ ಬೇಡಿಕೆ ಇಲ್ಲ. ಇದರಿಂದ ದರ ಸಂಪೂರ್ಣ ಕುಸಿದಿದೆ.

ಇದೇ ಹಾದಿಯಲ್ಲಿ ಕ್ಯಾರೆಟ್, ಎಲೆಕೋಸಿನ ದರಗಳು ಇವೆ. ಬೀನ್ಸ್‌ ದರ ಕೆ.ಜಿಗೆ ₹ 5 ಏರಿಕೆ ಕಂಡಿದ್ದು, ಬೆಳೆಗಾರರಲ್ಲಿ ನಿರೀಕ್ಷೆ ಮೂಡಿಸಿದೆ. ತೀರಾ ಕನಿಷ್ಠಕ್ಕೆ ಕುಸಿದಿದ್ದ ಬದನೆ ಕೆ.ಜಿಗೆ ₹ 3ರಷ್ಟು ಹೆಚ್ಚಿದೆ. ಹಸಿಮೆಣಸಿನಕಾಯಿ, ಬೀಟ್‌ರೂಟ್‌, ನುಗ್ಗೆಕಾಯಿ ದರಗಳು ಕಳೆದ ವಾರದ ಸ್ಥಿತಿಯಲ್ಲೇ ಮುಂದುವರಿದಿವೆ.

18 ದಿನಗಳಿಂದ ಯಥಾಸ್ಥಿತಿಯಲ್ಲಿರುವ ಕೋಳಿಮೊಟ್ಟೆ ಧಾರಣೆ: ಯಥಾಸ್ಥಿತಿಯಲ್ಲಿಯೇ ಮುಂದುವರಿದಿದ್ದ ಕೋಳಿ ಮೊಟ್ಟೆ ಧಾರಣೆ ಈ ಬಾರಿ ಕಡಿಮೆಯಾಗಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 4.35ರಲ್ಲಿ ಕಳೆದ ವಾರ ಇತ್ತು. ಈಗ ಇದರ ದರ ಒಂದು ಮೊಟ್ಟೆಗೆ ₹ 3.55ಕ್ಕೆ ಕಡಿಮೆಯಾಗಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮರ್ಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ ದರದಲ್ಲಿ ಏರಿಳಿತವಾಗಿದೆ. ಬ್ರಾಯ್ಲರ್ ಪೇರೆಂಟ್ ಕೋಳಿ ದರ ₹  ₹ 85ರಿಂದ ₹ 80ಕ್ಕೆ ಕಡಿಮೆಯಾಗಿದ್ದರೆ, ಕಮರ್ಷಿಯಲ್ ಬ್ರಾಯ್ಲರ್ ಕೋಳಿ ದರ ಕೆ.ಜಿಗೆ ₹ 87ರಿಂದ ₹ 85ಕ್ಕೆ ಕಡಿಮೆಯಾಗಿದೆ.

ಕಳೆದ ವರ್ಷವೂ ಇದೇ ಪರಿಸ್ಥಿತಿ

ಟೊಮೆಟೊ ದರ ಕುಸಿತ ಹೊಸತೇನೂ ಅಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲೂ ₹ 2ಕ್ಕೆ ಕುಸಿತವಾಗಿತ್ತು. ನಂತರ, ಮೇನಲ್ಲಿ ₹ 3, ಏ‍ಪ್ರಿಲ್‌ನಲ್ಲಿ ₹ 3.5ಕ್ಕೆ ಕಡಿಮೆಯಾಗಿತ್ತು. ಪ್ರತಿ ವರ್ಷ ಮಾಘಮಾಸ ತರಕಾರಿ ಬೆಳೆಗಾರರ ಪಾಲಿಗೆ ಶೂನ್ಯಮಾಸವಾಗಿಯೇ ಪರಿಣಮಿಸುತ್ತಿದೆ.

ನಿಯಂತ್ರಣಕ್ಕೆ ಬರುತ್ತಿರುವ ಈರುಳ್ಳಿ

ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ನಿಯಂತ್ರಣಕ್ಕೆ ಬರುತ್ತಿದೆ. ಇದರ ಕನಿಷ್ಠ ಧಾರಣೆ ₹ 25ರಿಂದ ₹ 16ಕ್ಕೆ ಕಡಿಮೆಯಾಗಿದ್ದರೆ, ಗರಿಷ್ಠ ಧಾರಣೆ ₹ 40ರಿಂದ ₹ 33ಕ್ಕೆ ಇಳಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಧಾರಣೆ ಇನ್ನೂ ಇಳಿದಿಲ್ಲ. 5ರಿಂದ 6 ದಿನಗಳಲ್ಲಿ ಬೆಲೆ ಇಳಿಯಬಹುದು ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.