ADVERTISEMENT

ಏಪ್ರಿಲ್‌ಗೆ ನದಿ ನೀರು: ಸಚಿವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 7:10 IST
Last Updated 7 ಫೆಬ್ರುವರಿ 2011, 7:10 IST

ನ್ಯಾಮತಿ: ಗೋವಿನಕೋವಿ ತುಂಗಭದ್ರಾ ನದಿಯಿಂದ ನ್ಯಾಮತಿ-ಸುರಹೊನ್ನೆ ಗ್ರಾಮಗಳಿಗೆ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ನೀರು ಸರಬರಾಜು ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಶನಿವಾರ  ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಚಿವರು, ಕೆಲವು ತಾಂತ್ರಿಕ ಆಡಚಣೆಗಳಿಂದ ನೀರು ಸರಬರಾಜು ಯೋಜನೆಗೆ ತೊಂದರೆಯಾಗಿತ್ತು. ಈಗ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಆದಷ್ಟು ಬೇಗ ಅವಳಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು.

ಪಟ್ಟಣದಲ್ಲಿರುವ ಈಗಿರುವ ಸಮುದಾಯ ಆಸ್ಪತ್ರೆಯ ಎರಡು ಕಟ್ಟಡ ತೆರವುಗೊಳಿಸಿ, ಸುಮಾರು 30 ಹಾಸಿಗೆ ನೂತನ ಕಟ್ಟಡ ನಿರ್ಮಾಣಕ್ಕೆ  ್ಙ 2.80 ಕೋಟಿ ಬಿಡುಗಡೆ ಆಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಹೊನ್ನಾಳಿಯನ್ನು ಪುರಸಭೆ ಮತ್ತು ನ್ಯಾಮತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಪರಿವರ್ತಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಕೆರೆಗಳ ಅಭಿವೃದ್ಧಿ, ಜಮೀನುಗಳಿಗೆ ಹೋಗುವ ದಾರಿ, ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ತುಂಗಾ ಏತ ನೀರಾವರಿ: ಸವಳಂಗ ಹೊಸ ಕೆರೆಗೆ ತುಂಗಾ ಏತ ನೀರಾವರಿ ಅಳವಡಿಸಲು ಸುಮಾರು ್ಙ 83 ಕೋಟಿ ಯೋಜನೆಯ ಕರಡು ಪ್ರತಿಗೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಒಪ್ಪಿಗೆ ದೊರೆತಿದ್ದು, ಟಿಎಸಿ ಅನುಮೋದನೆ ಪಡೆಯಬೇಕಿದೆ. ಈ ಯೋಜನೆ ಅನುಷ್ಠಾನದಿಂದ ಈ ಭಾಗದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದ್ದು, ಕೆರೆಯಿಂದ ಲೈನಿಂಗ್ ಕಾಮಗಾರಿಗೆ ್ಙ ಹತ್ತು ಕೋಟಿ ಬಿಡುಗಡೆಯಾಗಿದೆ ಎಂದರು.

ಶಿಕಾರಿಪುರ ಜಿಲ್ಲೆ ರಚನೆಗೆ ಬೆಂಬಲ: ಶಿಕಾರಿಪುರವನ್ನು ನೂತನ ಜಿಲ್ಲೆಯಾಗಿಸಿ, ನ್ಯಾಮತಿ ತಾಲ್ಲೂಕು ಕೇಂದ್ರ ಮಾಡುವ ಪ್ರಸ್ತಾವಕ್ಕೆ ತಾವು ಮತ್ತು ತಾಲ್ಲೂಕಿನ ಜನತೆ  ಮುಖ್ಯಮಂತ್ರಿಗೆ ಎಲ್ಲಾ ರೀತಿಯ ಬೆಂಬಲ ವ್ಯಕ್ತಪಡಿಸುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ವೀರಣ್ಣಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಎಂ. ಕೃಷ್ಣಾಚಾರ್, ಗ್ರಾ.ಪಂ. ಮಾಜಿ ಸದಸ್ಯ ಎನ್. ಬಸವರಾಜ, ಮುಖಂಡರಾದ ಎಚ್.ಎಂ. ಪಾಟೀಲ್, ಎಸ್. ರವಿಕುಮಾರ್, ತೋಂಟದಾರ್ಯ, ಎಂ. ಪಾಲಾಕ್ಷಪ್ಪ, ವಕೀಲ ರವಿ, ಬಾಬು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.