ADVERTISEMENT

ಐವರು ಆರೋಪಿಗಳಿಗೆ ಆಜೀವ ಕಾರಾಗೃಹ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಚನ್ನರಾಯಪಟ್ಟಣ: ಇಲ್ಲಿನ ಗಣೇಶ್‌ನಗರದಲ್ಲಿ ಹಾಡುಹಗಲೇ ಮನೆ ಕೆಲಸದಾಕೆಯ ಕೊಲೆ ಹಾಗೂ ಮನೆಯೊಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದ ಐವರು ಆರೋಪಿಗಳಿಗೆ ಆಜೀವ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಶೀಘ್ರ ವಿಲೇವಾರಿ ನ್ಯಾಯಾಧೀಶ ಬಿ. ಮುರಳೀಧರ ಪೈ, ಶನಿವಾರ ತೀರ್ಪು ನೀಡಿದರು.

ಪಟ್ಟಣದ ಮನುಕುಮಾರ್, ಪ್ರಶಾಂತ್, ಶಿವಮೊಗ್ಗದ ನಯಾಜ್, ಮುನ್ನ ಹಾಗೂ ರಷೀದ್ ಶಿಕ್ಷೆಗೊಳಗಾದ ಆರೋಪಿಗಳು. ಹಾಸನದ ಜೈಲಿನಿಂದ ಬಿಗಿ ಪೊಲೀಸ್ ರಕ್ಷಣೆಯಲ್ಲಿ ಅವರನ್ನು ಪಟ್ಟಣಕ್ಕೆ ಕರೆತರಲಾಯಿತು.
2005 ಆಗಸ್ಟ್ 24 ರಂದು ಮಧ್ಯಾಹ್ನ 12ಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ತಿಮ್ಮೇಗೌಡ ಅವರ ಪತ್ನಿ ಭಾಗ್ಯಲಕ್ಷ್ಮೀ, ಚಿನ್ನದ ಒಡವೆ ಧರಿಸಿ, ಸಂಬಂಧಿಕರೊಬ್ಬರ ಗೃಹಪ್ರವೇಶಕ್ಕೆ ತೆರಳಲು ಪತಿಗಾಗಿ ಕಾಯುತ್ತಿದ್ದರು.
 
ಆಗ ಮನುಕುಮಾರ್, ಬಾಗಿಲು ತಟ್ಟಿ, ಮೊಸರಿಗೆ ಹೆಪ್ಪು ಕೇಳುವ ನೆಪದಲ್ಲಿ ಮನೆ ಪ್ರವೇಶಿಸಿದ. ಮೊದಲೇ ಮನೆಯ ಹೊರಗೆ ಹೊಂಚು ಹಾಕಿ ಕುಳಿತ್ತಿದ್ದ ಪ್ರಶಾಂತ್, ನಯಾಜ್, ಮುನ್ನ, ರಷೀದ್ ಇದೇ ಸಂದರ್ಭದಲ್ಲಿ ಮನೆಗೆ ನುಗ್ಗಿದರು. ಏಕಾಏಕಿ ಭಾಗ್ಯಲಕ್ಷ್ಮಿ ಅವರಿಗೆ ಮಚ್ಚಿನಿಂದ ಗಾಯಗೊಳಿಸಿ, ಚಾಕುವಿನಿಂದ ತಿವಿಯುತ್ತಿದ್ದಂತೆ ಆಕೆ ನೆಲಕ್ಕೆ ಕುಸಿದು ಬಿದ್ದರು.

ಈಕೆ ಮೃತಪಟ್ಟರು ಎಂದು ಭಾವಿಸಿದ ಆರೋಪಿಗಳು ಆಕೆಯ ಮೈ ಮೇಲಿದ್ದ ಒಡವೆ ದೋಚಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೆಯೊಡತಿಯನ್ನು ಗಮನಿಸಿದ ಮನೆ ಕೆಲಸದಾಕೆ ಮೆಹರ್ ಉನ್ನಿಸಾ ಜೋರಾಗಿ ಕೂಗಿಕೊಂಡರು. ಈಕೆ ಪ್ರಮುಖ ಸಾಕ್ಷಿಯಾಗುತ್ತಾಳೆ ಎಂದು ತಿಳಿದ ಆರೋಪಿಗಳು ಮೆಹರ್ ಉನ್ನಿಸಾ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದರು. ನಂತರ ಮೋಟಾರ್ ಬೈಕಿನಲ್ಲಿ ಪರಾರಿಯಾಗಿದ್ದರು.
ಸರ್ಕಾರಿ ಅಭಿಯೋಜಕ ಹೊ.ನಂ. ಜಯದೇವೇಗೌಡ, ಸರ್ಕಾರದ ಪರ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.