ADVERTISEMENT

ಓವರ್‌ಲೋಡ್ ಸಮಸ್ಯೆ ತಡೆ- ಲಾರಿ ಮಾಲೀಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST
ಓವರ್‌ಲೋಡ್ ಸಮಸ್ಯೆ ತಡೆ- ಲಾರಿ ಮಾಲೀಕರ ಒತ್ತಾಯ
ಓವರ್‌ಲೋಡ್ ಸಮಸ್ಯೆ ತಡೆ- ಲಾರಿ ಮಾಲೀಕರ ಒತ್ತಾಯ   

ರಾಯಚೂರು: ಜಿಲ್ಲೆಯಲ್ಲಿ ಟ್ರಕ್, ಲಾರಿ ಸೇರಿದಂತೆ ವಿವಿಧ ಸರಕು ಸಾಗಣೆ ವಾಹನಗಳಲ್ಲಿ ನಿರ್ದಿಷ್ಟಪಡಿಸಿದ ಮಟ್ಟಕ್ಕಿಂತ ಹೆಚ್ಚಿನ ತೂಕದ ಸರಕು (ಓವರ್‌ಲೋಡ್) ಸಾಗಾಟ ನಡೆಯುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು ಎಂದು ರಾಯಚೂರು ಜಿಲ್ಲಾ ಲಾರಿ ಮಾಲೀಕರ ಸಂಘವು ಬುಧವಾರ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿತು.

ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳು, ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಜಿಲ್ಲೆಯಲ್ಲಿ ಸರಕು ವಾಹನಗಳಲ್ಲಿ ನಡೆಯುತ್ತಿರುವ ಓವರ್‌ಲೋಡ್ ತಡೆಗಟ್ಟಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

ಓವರ್‌ಲೋಡ್ ತಡೆಗಟ್ಟಲು ಸಾರಿಗೆ, ಪೊಲೀಸ್ ಅಧಿಕಾರಿಗಳಿಗೆ ಕೆಲ ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕಾಗಿದೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಸ್ಪಂದಿಸದೇ ಇದ್ದರೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಲಾರಿ ಮಾಲೀಕರ ಸಂಘದಿಂದ  ಧರಣಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಸಯ್ಯದ್ ಮುಕ್ರಮ್ ಹೇಳಿದರು. ನಮ್ಮ ಲಾರಿಗಳು ಹೆಚ್ಚು ಬಾಳಿಕೆ ಬರಬೇಕು. ಸರ್ಕಾರದ ನಿರ್ದಿಷ್ಟ ಪಡಿಸಿದ ಮತ್ತು ಒಂದು ಲಾರಿ ಎಷ್ಟು ಭಾರ ಹೊರಲು ಸೂಕ್ತ ಎಂದು ತಾಂತ್ರಿಕ ಶಿಫಾರಸು ಇರುತ್ತದೆಯೋ ಆ ಪ್ರಮಾಣದ ಸರಕು ಸಾಗಿಸಬೇಕು. ಲಾರಿ ಮಾಲೀಕರ ಸಂಘದ ಬೇಡಿಕೆಯೂ ಇದೇ ಆಗಿದೆ. ಆದರೆ ಅಕ್ಕಿ ಗಿರಣಿ ಸೇರಿದಂತೆ ಕೆಲ ಕೈಗಾರಿಕೆಗಳ ಮಾಲೀಕರು ಓವರ್‌ಲೋಡ್‌ಗೆ ಒತ್ತಡ ಹೇರುತ್ತಾರೆ. ಒತ್ತಡಕ್ಕೆ ಸಿಲುಕಿ ಓವರ್‌ಲೋಡ್ ಮಾಡಿದರೆ ಅಪಘಾತ, ನಿರ್ದಿಷ್ಟ ಸಮಯದಲ್ಲಿ ತಲುಪುವಲ್ಲಿ ವಿಳಂಬ, ಟಯರ್ ಸಿಡಿತದಂಥ ಸಮಸ್ಯೆ ಆಗಿ ಅಪಾಯ ಆಗುತ್ತದೆ. ಹೀಗಾಗಿ ಕೂಡಲೇ ಈ ಸಮಸ್ಯೆ ಹೋಗಲಾಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಉಪಾಧ್ಯಕ್ಷ ಮಹಮ್ಮದ್ ಶಫಿಉಲ್ಲಾ, ಕಾರ್ಯದರ್ಶಿ ಯಾಹಿಯಾ ಬಾ ಉಸ್ಮಾನ್, ಜಂಟಿ ಕಾರ್ಯದರ್ಶಿ ಮಹಮ್ಮದ್ ಇಬ್ರಾಹಿಂ, ಖಜಾಂಚಿ ಸಯ್ಯದ್ ಯೂನೂಸ್ ಸಲೀಮ್, ಲಾರಿ ಮಾಲೀಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.