ADVERTISEMENT

ಕನ್ನಡ ನಾಡು, ನುಡಿ ಬೆಳವಣಿಗೆಗೆ ಪ್ರತಿಯೊಬ್ಬರ ಸಂಕಲ್ಪ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:06 IST
Last Updated 28 ಅಕ್ಟೋಬರ್ 2017, 6:06 IST
ಗೌರಿಬಿದನೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ನಡೆದ ಕನ್ನಡ ನುಡಿ ಹಬ್ಬ ಕಾರ್ಯಕ್ರಮವನ್ನು ಪ್ರಾಂಶುಪಾಲೆ ಡಾ.ನಾಗರತ್ನಮ್ಮ ಉದ್ಘಾಟಿಸಿದರು
ಗೌರಿಬಿದನೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ನಡೆದ ಕನ್ನಡ ನುಡಿ ಹಬ್ಬ ಕಾರ್ಯಕ್ರಮವನ್ನು ಪ್ರಾಂಶುಪಾಲೆ ಡಾ.ನಾಗರತ್ನಮ್ಮ ಉದ್ಘಾಟಿಸಿದರು   

ಗೌರಿಬಿದನೂರು: ಶತಮಾನಗಳ ಇತಿಹಾಸವಿರುವ ಕನ್ನಡ ಭಾಷೆ, ಸಾಹಿತ್ಯಗಳ ಅಭಿವೃದ್ಧಿಗಾಗಿ ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ಎಲ್ಲರೂ ಸಂಕಲ್ಪ ಬಲದಿಂದ ದುಡಿಯಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತಿ ಸಿ.ಜಿ. ವೆಂಕಟೇಶ್ವರ ತಿಳಿಸಿದರು.

ಪಟ್ಟಣದ ಆಚಾರ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಂಧ್ರ ಪ್ರದೇಶದ ಗಡಿಭಾಗದಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಿದ್ದು. ಕನ್ನಡ ಭಾಷೆ ತೆಲುಗು ಭಾಷೆ ಮಾತನಾಡುವವರನ್ನು ಆಕರ್ಷಿಸುವ ಮೂಲಕ ಕನ್ನಡ ಭಾಷೆ ಮನೆ ಮಾತಾಗಬೇಕು. ಕನ್ನಡ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಭಾಷೆಯ ಬಗೆಗಿನ ಪ್ರೀತಿ, ಅಭಿಮಾನ ಬೆಳೆಯುವಂತಾಗಬೇಕು ಎಂದು ಹೇಳಿದರು.

ADVERTISEMENT

ಕನ್ನಡದ ಉತ್ಕೃಷ್ಟ ಗ್ರಂಥಗಳನ್ನು ನಿತ್ಯ ಅಭ್ಯಾಸ ಮಾಡುವುದರಿಂದ ವ್ಯಕ್ತಿತ್ವ ವಿಕಸನವಾಗುವುದು. ಬೃಹತ್ ಕಾವ್ಯ, ಕಾದಂಬರಿ, ಕಥೆಗಳ ಬದಲಿಗೆ ಚುಟುಕು ಸಾಹಿತ್ಯದ ಮೂಲಕ ಅಪರಿಮಿತ ವಿಷಯವನ್ನು ಕೆಲವೇ ಸಾಲುಗಳಲ್ಲಿ ಕಟ್ಟಿ ಕೊಡುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದರು.

ಚುಟುಕು ಬ್ರಹ್ಮ ಎಂದು ಬಿರುದು ಪಡೆದಿರುವ ದಿನಕರ ದೇಸಾಯಿ, ಡುಂಡಿರಾಜ್ ಅವರ ಕೆಲ ಚುಟುಕು ಪದ್ಯಗಳನ್ನು ಹೇಳುವುದರ ಜೊತೆಗೆ ತಾವು ಸ್ವರಚಿತ ಚುಟುಕು ಪದ್ಯಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ವಿ. ರವೀಂದ್ರನಾಥ್ ಮಾತನಾಡಿ, ಕನ್ನಡ ಭಾಷೆಯ ರಕ್ಷಣೆ ಹಾಗೂ ಸಂವರ್ಧನೆಯು ಅದರ ಬಳಕೆಯಿಂದ ಸಾಧ್ಯ. ಭಾಷೆಯ ಬೆಳವಣಿಗೆಗೆ ಸಮಾಜ, ಸರ್ಕಾರ ಒಗ್ಗೂಡಿ ಕಾರ್ಯ ನಿರ್ವಹಿಸಬೇಕು. ಕನ್ನಡ ಅನ್ನ ನೀಡುವ ಭಾಷೆಯಾದಾಗ ಉನ್ನತಿ ಸಾಧಿಸುತ್ತದೆ ಎಂದು ತಿಳಿಸಿದರು.

ಆಚಾರ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಾಗರತ್ನಮ್ಮ, ಪ್ರಾಧ್ಯಾಪಕ ಪ್ರೊ. ಚಂದ್ರಶೇಖರರೆಡ್ಡಿ, ಡಾ.ಅಶ್ವತ್ಥರೆಡ್ಡಿ, ಡಾ. ಇಳಂಗೋ, ಪರ್ವೀನ್ ಬೇಗಂ, ಉಪನ್ಯಾಸಕ ಹನುಮಂತರಾಜು, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಂಜುಂಡಪ್ಪ, ನಗರ ಘಟಕದ ಅಧ್ಯಕ್ಷ ಬಷೀರ್, ಪರಿಷತ್ತಿನ ಸದಸ್ಯರಾದ ಕೆ. ರಾಮಾಂಜನೇಯಲು, ಕೃಷ್ಣಕುಮಾರಿ, ಗೀತಾ ಅಶ್ವತ್ಥನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.