ADVERTISEMENT

ಕನ್ನಡ ನುಡಿತೇರಿಗೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಕೆಜಿಎಫ್:  ಗಡಿ ಪ್ರದೇಶಗಳಲ್ಲಿ ಭಾಷಾ ಸೌಹಾರ್ದ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿರುವ ಕನ್ನಡ ನುಡಿ ತೇರಿಗೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ವೆಂಕಟರಮಣಸ್ವಾಮಿ ದೇವಾಲಯದ ಬಳಿ ಮುಂಜಾನೆ ನಾಡೋಜ ಮುನಿವೆಂಕಟಪ್ಪ ಜಾಥಾಗೆ ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಾಹಿತಿ ಕಮಲಾ ಹಂಪನ, ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಶಿವಯೋಗಿಸ್ವಾಮಿ, ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನ, ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಂತರ ಪ್ರಮುಖರು ನುಡಿ ತೇರಿನ ವಾಹನದಲ್ಲಿ ನಗರಸಭೆ ಮೈದಾನಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು. ಕಳಸ ಹೊತ್ತ, ಕನ್ನಡ ಧ್ವಜ ಹಿಡಿದ ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

ರಾಮನಗರ ಡೋಲು ಕುಣಿತ, ಬೆಳಗಾವಿ ಜಗ್ಗಲಿಗೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಮಹಿಳಾ ವೀರಗಾಸೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂಸಾಳೆ ಕುಣಿತ, ಮಹಿಳಾ ನಂದಿ ಧ್ವಜ ಕುಣಿತ, ತಮಟೆ, ಕೋಲು ಮನುಷ್ಯ ಮತ್ತು ತಟ್ಟಿರಾಯನ ಪ್ರದರ್ಶನಗಳು ಗಮನ ಸೆಳೆದವು. ನಗರಸಭೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಗೈರು ಹಾಜರಿಯಲ್ಲಿ ಕಮಲಾ ಹಂಪನ ಕಾರ್ಯಕ್ರಮ ಉದ್ಘಾಟಿಸಿದರು.

ನುಡಿ ತೇರಿಗೆ ವಕೀಲರ ಸಂಘ, ತಮಿಳು ಸಂಘ, ಬಿಜಿಎಂಎಲ್ ಕಾರ್ಮಿಕರು ಅಲ್ಲಲ್ಲಿ ಸ್ವಾಗತ ನೀಡಿ ಪೂಜೆ ಸಲ್ಲಿಸಿದರು. ನಂತರ ಬೆಮಲ್‌ನಗರಕ್ಕೆ ಭೇಟಿ ನೀಡಿದ ಜಾಥಾ, ದಾಸರಹೊಸಹಳ್ಳಿ ಮೂಲಕ ಬಂಗಾರಪೇಟೆಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.