ADVERTISEMENT

ಕನ್ನಡ ಶಾಲೆ ಮುಚ್ಚುವ ನಿರ್ಧಾರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಮಾಲೂರು: ತಾಲ್ಲೂಕಿನ ಗಡಿ ಭಾಗಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಶಿಕ್ಷಣ ಇಲಾಖೆಯ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರು ಶನಿವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಮಕೃಷ್ಣಪ್ಪ, ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕೆಂಬ ಸುತ್ತೋಲೆ ಇದೆ. ಗಡಿ ಪ್ರದೇಶದ ಶಾಲೆಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ದಾಖಲಾತಿ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ನೆಪವೊಡ್ಡಿ ಖಾಸಗಿ ಶಾಲೆಗಳನ್ನು ಪ್ರೋತ್ಸಾಹಿಸುವ ಹಾಗೂ ಅವರಿಂದ ಹಣ ಲೂಟಿ ಮಾಡುವ ದುರುದ್ದೇಶದಿಂದ ಶಿಕ್ಷಣ ಸಚಿವರು ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದ್ದಾರೆ.

ಗ್ರಾಮೀಣ ಬಡ ಕುಟುಂಬದ ಮಕ್ಕಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಸಾಧ್ಯವಿಲ್ಲ. ಖಾಸಗಿ ಶಾಲೆಗೆ ಸೇರಿದರೆ ಸಮವಸ್ತ್ರ, ಬಿಸಿಯೂಟ ಸೇರಿದಂತೆ ಹಲವು ಸೌಲಭ್ಯಗಳಿಂದ ಮಕ್ಕಳು ವಂಚಿತರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಇಓ ಎನ್.ವೆಂಕಟರಾಮ ರೆಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಕರವೇ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎ.ಎನ್.ದಯಾನಂದ್, ಮುಖಂಡರಾದ ಕೊಪ್ಪ ಚಂದ್ರು, ಶ್ರೀನಿವಾಸ್, ಪಾಪರೆಡ್ಡಿ, ಶಿವಾರನಾಣಿ, ರಮೇಶ್, ಮಧು, ಸಿ.ಡಿ.ನಾಗರಾಜ್, ಬಿ.ಎನ್‌ನಾರಾಯಣಸ್ವಾಮಿ, ಮಾಸ್ತಿ ಮಂಜು, ಪ್ರಸಾದ್, ಮಹಿಳಾ ಘಟಕದ ಗೀತಾ ಪ್ರಕಾಶ್, ಅಮರಾವತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.