ADVERTISEMENT

ಕನ್ನಡ ಸತ್ವವುಳ್ಳ ಭಾಷೆ: ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಚಿಂತಾಮಣಿ : ಸೂರ್ಯ, ಚಂದ್ರ ಇರುವ ತನಕ ಕನ್ನಡ ಭಾಷೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡಕ್ಕೆ ಅವಸಾನ ಕಾಲ ಬಂದಿದೆ ಎನ್ನುವುದು ತಾತ್ಕಾಲಿಕ. ಸತ್ವ, ಚೈತನ್ಯ, ಲವಲವಿಕೆ ಇರುವ ಭಾಷೆ ಕನ್ನಡ. ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಯಾವ ಭಾಷೆಯಾದರೂ ಕಲಿಯಿರಿ, ಕನ್ನಡಕ್ಕೆ ಅಗ್ರಸ್ಥಾನ ನೀಡಿ. ಇನ್ನಷ್ಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಶಕ್ತಿ ಕನ್ನಡಕ್ಕಿದೆ ಎಂದು ಅವರು ಹೇಳಿದರು.

ಸಾಹಿತಿಗಳಾದವರು ಸದಾ ಸಮಾಜದ ಹಿತವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಕಲ್ಪಿಸು ಹೋರಾಟಕ್ಕೆ ಧ್ವನಿಯಾಗುವ ಸಾಹಿತ್ಯ ರಚನೆಯಾಗಬೇಕಿದೆ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜರಾವ್ ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ಹೊರತರುವುದು, ಸಂಸ್ಕೃತಿ ಮತ್ತು ಕಲಾವಿದರನ್ನು ಬೆಳಕಿಗೆ ತರುವುದು, ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಗಮನ ಸೆಳೆಯುವುದು ಸಾಹಿತ್ಯ ಸಮ್ಮೇಳನದ ಉದ್ದೇಶ ಎಂದು ವಿವರಿಸಿದರು.

ಶಾಸಕ ಡಾ.ಎಂ.ಸಿ.ಸುಧಾಕರ್ ಅಧ್ಯಕತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ, ತಾ.ಪಂ. ಅಧ್ಯಕ್ಷ ಶೇಖರಬಾಬು, ಜಿ.ಪಂ. ಸದಸ್ಯ ಚಿನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.