ADVERTISEMENT

ಕಬ್ಬಳ: ಮದ್ಯ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ದಾವಣಗೆರೆ: ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿ ಚನ್ನಗಿರಿ ತಾಲ್ಲೂಕು ಕಬ್ಬಳ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಬ್ಬಳ ಗ್ರಾಮ ಸಂಪೂರ್ಣ ಹಿಂದುಳಿದ ಗ್ರಾಮವಾಗಿದ್ದು, ಶೇ. 80ರಷ್ಟು ಪರಿಶಿಷ್ಟ ಜನರು ವಾಸಿಸುತ್ತಿದ್ದಾರೆ. ಅವರೆಲ್ಲರೂ ಕೂಲಿಯಿಂದ ಜೀವನ ಸಾಗಿಸುತ್ತಿದ್ದು, ಮಿತಿ ಮೀರಿದ ಮದ್ಯದ ಅಂಗಡಿಗಳಿಂದಾಗಿ ದುಡಿದ ಹಣವನ್ನೆಲ್ಲ ಕುಡಿತಕ್ಕೆ ಸುರಿಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಪುರುಷರ ಮದ್ಯ ವ್ಯಸನದಿಂದಾಗಿ ಮಹಿಳೆಯರು ಮಕ್ಕಳು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕುಡಿತದಿಂದ ಆಗುವ ಹಿಂಸೆ ಮಿತಿಮೀರಿದೆ. ನಿತ್ಯವೂ ಗೋಳು ಮಾಮೂಲು ಎನ್ನುವಂತಾಗಿದೆ. ದುಡಿದ ಹಣ ಮದ್ಯದ ಅಂಗಡಿ ಪಾಲಾಗುತ್ತಿರುವ ಕಾರಣ ಅನೇಕ ಕುಟುಂಬದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ ಎಂದು ದೂರಿದರು.

ನಿತ್ಯವೂ ಬೆಳೆಗ್ಗೆಯಿಂದ ಸಂಜೆಯವರೆಗೂ ಕುಡಿಯುವುದನ್ನೇ ಕಾಯಕ ಮಾಡಿಕೊಂಡ ಜನರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಿಂಸೆಯಿಂದ ಮಹಿಳೆಯರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನೆಲ್ಲ ನೋಡಿ ಯುವ ಜನರೂ ದಾರಿ ತಪ್ಪುತ್ತಿದ್ದಾರೆ. ಇದು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮದ್ಯದ ಅಂಗಡಿಗಳ ಪರವಾನಗಿ ರದ್ದುಪಡಿಸಿ, ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.

ಗಾ. ಪಂ.ಸದಸ್ಯರಾದ ಕಮಲಾಬಾಯಿ, ಮಧುಬಾಯಿ, ಮುಖಂಡರಾದ ಶಿವಾನಾಯ್ಕ, ಅರುಣ್, ಯೋಗೇಂದ್ರಸ್ವಾಮಿ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.