ADVERTISEMENT

ಕಬ್ಬಿನ ಸೂಕ್ತ ಬೆಲೆಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 19:00 IST
Last Updated 28 ಮಾರ್ಚ್ 2011, 19:00 IST
ಕಬ್ಬಿನ ಸೂಕ್ತ ಬೆಲೆಗಾಗಿ ಪ್ರತಿಭಟನೆ
ಕಬ್ಬಿನ ಸೂಕ್ತ ಬೆಲೆಗಾಗಿ ಪ್ರತಿಭಟನೆ   

ಹೊಳೆನರಸೀಪುರ: ಸೂಕ್ತ ಬೆಲೆ ನೀಡಿ ರೈತರಿಂದ ಕಬ್ಬು ಖರೀದಿ ನಡೆಸಬೇಕು ಮತ್ತು ಕಬ್ಬು ನುರಿಸುವ ಕಾರ್ಯವನ್ನು ಶೀಘ್ರದಲ್ಲೇ  ಆರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಕಬ್ಬು ನುರಿಸದಿರುವುದರಿಂದ ತಾಲ್ಲೂಕಿನಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಕಬ್ಬು ಒಣಗುತ್ತಿದೆ. ಕೂಡಲೇ ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆ  ಸೂಕ್ತ ಬೆಲೆ ನೀಡಿ ಕಬ್ಬನ್ನು ಖರೀದಿಸಬೇಕು, ರೈತರಿಗೆ ಶೇ. 4ರಂತೆ ಎಲ್ಲಾ ಬ್ಯಾಂಕ್‌ಗಳಲ್ಲಿ ಸಾಲ ನೀಡಬೇಕು. ರೈತರು ಟ್ರ್ಯಾಕ್ಟರ್ ಖರೀದಿಗೆ  ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು, ಎಲ್ಲ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಈಗಾಗಲೇ ಧಾರಣೆ ಕುಸಿದಿರುವ ಆಲೂಗೆಡ್ಡೆ, ಶುಂಠಿ, ಅಡಿಕೆ, ರೇಷ್ಮೆ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡಬೇಕು, ಪಟ್ಟಣ ಪುರಸಭೆ ರೈತರಿಂದ ಯಾವುದೇ ರೀತಿಯ ಸುಂಕ ವಸೂಲಿ ಮಾಡಬಾರದು ಎನ್ನುವ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.

ಅಪಾರ ಸಂಖ್ಯೆಯ ರೈತರು ಚನ್ನಾಂಬಿಕ ಚಿತ್ರಮಂದಿರ ವೃತ್ತದಿಂದ ಪೇಟೆ ಮುಖ್ಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಗಾಂಧಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ತಾಲ್ಲೂಕು ಕಚೇರಿ ಮುಂಭಾಗ ಕುಳಿತ ರೈತರನ್ನುದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿದರು. ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ನಿಂಗೇಗೌಡ, ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ, ತಾಲ್ಲೂಕು ಘಟಕದ ಅಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಜವರೇಶ ಇತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.