ADVERTISEMENT

ಕಳಪೆ ಕಾಮಗಾರಿ: ಅಪಾಯದಲ್ಲಿ ನಾಲೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2011, 19:30 IST
Last Updated 10 ಆಗಸ್ಟ್ 2011, 19:30 IST
ಕಳಪೆ ಕಾಮಗಾರಿ: ಅಪಾಯದಲ್ಲಿ ನಾಲೆ
ಕಳಪೆ ಕಾಮಗಾರಿ: ಅಪಾಯದಲ್ಲಿ ನಾಲೆ   

ರಾಮನಾಥಪುರ: ಕಟ್ಟೇಪುರ ಅಣೆ ಕಟ್ಟೆಯ ಎಡ ಮತ್ತು ಬಲದಂಡೆ ನಾಲೆ ಗಳ ಕಾಮಗಾರಿ ಕಳಪೆಯಾಗಿದೆ ಎಂಬ ಸ್ಥಳೀಯರ ಆರೋಪಗಳಿಗೆ ಈಗ ಪುರಾವೆ ಲಭಿಸಿದೆ. ಅಣೆಕಟ್ಟೆಯಿಂದ ಈಚೆಗೆ ನೀರು ಬಿಡಲಾಗಿದ್ದು, ನಾಲೆ ಏರಿ ಕುಸಿದು ಕೊಚ್ಚಿ ಹೋಗುವ ಅಪಾಯ ಎದುರಾಗಿದೆ.

ಶತಮಾನ ಕಂಡಿರುವ ಈ ಅಣೆ ಕಟ್ಟೆಯ ನಾಲೆ ಶಿಥಿಲವಾಗಿ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿರಲಿಲ್ಲ. ಹೀಗಾಗಿ  ನಾಲೆಗಳ ಆಧುನೀಕರಣ ಮಾಡಬೇಕು ಎಂದು ಈ ಭಾಗದ ರೈತರು ಹಲವಾರು ವರ್ಷಗಳಿಂದ ಮನವಿ ಮಾಡುತ್ತಿದ್ದರು. ಒತ್ತಾಯಕ್ಕೆ ಸ್ಪಂದಿಸಿದ ಸರ್ಕಾರ 2010 ರಲ್ಲಿ 121.39 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆರಂಭದಿಂದಲೂ ಕಾಮಗಾರಿ ಗುಣಮಟ್ಟದ ಬಗ್ಗೆ ಜನರು ದೂರುತ್ತಾ ಬಂದಿದ್ದಾರೆ. ಕಾಮಗಾರಿಯ ಸ್ಥಿತಿಯ ಬಗ್ಗೆ `ಪ್ರಜಾವಾಣಿ~ಯ ಜೂನ್ 7ರ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ನೀರು ಹರಿಸಿದ್ದರಿಂದ ಕಾಮಗಾರಿ ಗುಣಮಟ್ಟ ಬಯಲಾಗಿದೆ.

ಹೂಳು ತೆಗೆಯದೆ ನಾಲೆಗಳಿಗೆ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ನಿರ್ಮಿಸಿ ಮಣ್ಣು ತಂದು ಸುರಿದು ಏರಿಗೆ ಕಟ್ಟಿರುವ ಕಾರಣ ಈಗ ಮಣ್ಣು ನಾಲೆಗೆ ಕುಸಿಯುತ್ತಿದೆ. ಅಗಲವಾಗಿದ್ದ ನಾಲೆಯನ್ನು ಕಿರಿದುಗೊಳಿಸಿ ಏರಿಯ ಎತ್ತರಅಗೆದು ಕುಗ್ಗಿಸಲಾಗಿದೆ.
 
ಆಧುನೀಕರಣದ ನೆಪದಲ್ಲಿ ನಾಲೆಯ ಆಕಾರ ಹದ ಗೆಟ್ಟಿದೆ. ಜಮೀನುಗಳಿಗೆ ನೀರು ಹೋಗಲು ಅಳವಡಿಸಿದ್ದ ತೂಬು ಕಳೆದು ಹೋಗಿವೆ. ಕಾಮಗಾರಿ ಸಮರ್ಪಕ ವಾಗಿ ನಡೆಯದೇ ನೀರು ಸರಾಗ ವಾಗಿ ಹರಿಯುತ್ತಿಲ್ಲ.   ಶಾಸಕರು ಗಮನ ಹರಿಸದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.