ADVERTISEMENT

ಕವನ ಜನರಿಗೆ ತಲುಪಲು ಗಾಯನವೂ ಮುಖ್ಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 16:45 IST
Last Updated 23 ಫೆಬ್ರುವರಿ 2011, 16:45 IST

ಮಂಡ್ಯ: ಕವಿಗಳ ರಚನೆಯನ್ನು ಸಂಗೀತ ಮಾಧ್ಯಮದ ಮೂಲಕ ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವುದೇ ಸುಗಮ ಸಂಗೀತದ ಕೆಲಸ ಎಂದು ಗಾಯಕ ಶಿವಮೊಗ್ಗ ಸುಬ್ಬಣ್ಣ ಅಭಿಪ್ರಾಯಪಟ್ಟರು.

ಬುಧವಾರ ಮಂಡ್ಯದಲ್ಲಿ ‘ಪಿಇಎಸ್ ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕೇಂದ್ರ’ ಉದ್ಘಾಟಿಸಿದ ಅವರು, ತಲುಪಿಸುವುದು ಎಂದರೆ ಇಲ್ಲಿ ಸಂಗೀತ ಕೇವಲ ನೆಪ ಮಾತ್ರ. ಕವಿಗಳ ರಚನೆ ಜನರಿಗೆ ಹತ್ತಿರವಾಗಬೇಕಾದರೆ ಗಾಯನವೂ ಮುಖ್ಯ ಎಂದರು.

ಇಂದಿನ ಯುವಜನರು ಸಿನಿಮಾ ಸಂಗೀತದತ್ತ ಆಕರ್ಷಣೆ ಬೆಳೆಸಿಕೊಳ್ಳುವುದು ಸಾಮಾನ್ಯ. ಜೊತೆಗೆ, ಸುಗಮ ಸಂಗೀತದತ್ತಲೂ ಆಸಕ್ತಿ ಬೆಳೆಸಿಕೊಂಡು, ಕುವೆಂಪು, ಬೇಂದ್ರೆ ಅವರನ್ನು ಪರಿಚಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸುವಲ್ಲಿ ಪ್ರತಿಭಾಂಜಲಿ ಅಕಾಡೆಮಿಯ ಮೂಲಕ ಡೇವಿಡ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅವರು ‘ಬಾರಿಸು ಕನ್ನಡ ಡಿಂಡಿಮವ..’ ಸೇರಿ ಮೂರು ಗೀತೆಗಳನ್ನು ಹಾಡಿದರು.

ಪಿಇಟಿ ಅಧ್ಯಕ್ಷ ಎಚ್.ಡಿ.ಚೌಡಯ್ಯ, ಪ್ರಾಚಾರ್ಯ ಪ್ರೊ. ಜಿ.ಟಿ.ವೀರಪ್ಪ, ನಿವೃತ್ತ ಪ್ರಾಚಾರ್ಯ ಪ್ರೊ. ಎನ್.ಎಲ್. ಮುರಳೀಧರ ಮತ್ತಿತರರು ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.