ADVERTISEMENT

ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್‌ಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:56 IST
Last Updated 7 ಡಿಸೆಂಬರ್ 2017, 9:56 IST
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್‌ಗಳು ಅಸ್ವಸ್ಥ
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್‌ಗಳು ಅಸ್ವಸ್ಥ   

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ‍ಪೆಲಿಕಾನ್‌ಗಳು (ಹೆಜ್ಜಾರ್ಲೆ ಪಕ್ಷಿ) ಅಸ್ವಸ್ಥಗೊಂಡಿದ್ದು, ಪಕ್ಷಿ ಪ್ರಿಯರು ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲಾ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪೆಲಿಕಾನ್‌ಗೆ ಚಿಕಿತ್ಸೆ ನೀಡಿದರು.

‘ಎರಡು ದಿನಗಳಿಂದ ಕೆಲ ಪೆಲಿಕಾನ್‌ಗಳು ಅಸ್ವಸ್ಥಗೊಂಡಿವೆ. ಪಕ್ಷಿಗಳು ಸತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಒಂದು ಪಕ್ಷಿಯ ಕಾಲಿಗೆ ಪೆಟ್ಟಾಗಿದ್ದು, ಚುಚ್ಚುಮದ್ದು ನೀಡಿ ಉಪಚರಿಸಿದ್ದೇವೆ’ ಎಂದು ಪಶುವೈದ್ಯ ಎಚ್‌.ಸಿ.ಶ್ರೀನಿವಾಸ್‌ ತಿಳಿಸಿದರು.

ADVERTISEMENT

‘ಕೆರೆಯಲ್ಲಿ ಸುಮಾರು 200 ಪೆಲಿಕಾನ್‌ಗಳಿವೆ. ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇಲ್ಲ. ನಿಗಾ ಇಟ್ಟಿದ್ದು, ಯಾವುದೇ ಆತಂಕ ಬೇಡ’ ಎಂದು ಹೇಳಿದರು.

ಗಾಯಗೊಂಡಿರುವ ಪೆಲಿಕಾನ್‌ ಪಕ್ಷಿಯನ್ನು ಬೋಗಾದಿಯಲ್ಲಿರುವ ‘ಪೀಪಲ್ಸ್‌ ಫಾರ್‌ ಅನಿಮಲ್‌’ ಸಂಸ್ಥೆಯವರು ತೆಗೆದುಕೊಂಡು ಹೋಗಿದ್ದಾರೆ.

‘ಪಕ್ಷಿಯನ್ನು ಉಪಚರಿಸಿ ವಾಪಸ್‌ ಇಲ್ಲಿಗೇ ತಂದು ಬಿಡಲಿದ್ದಾರೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮತ್ತೊಂದು ಪೆಲಿಕಾನ್‌ ಕೆರೆ ಮಧ್ಯಕ್ಕೆ ಹೋಗಿ ತಪ್ಪಿಸಿಕೊಂಡಿತು. ವಯಸ್ಸಾಗಿರುವ ಕಾರಣ ಕೆಲ ‍ಪಕ್ಷಿಗಳು ಅನಾರೋಗ್ಯಕ್ಕೆ ಒಳಗಾಗಿವೆ’ ಎಂದು ಕೆರೆ ಸಂರಕ್ಷಣೆ ಸದಸ್ಯ ಕೆ.ಎಂ.ಜಯರಾಮಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.