ADVERTISEMENT

ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನ್ಯಾಮತಿ: ಸಮೀಪದ ಸವಳಂಗ ಗ್ರಾಮ ಪಂಚಾಯ್ತಿ ಆಡಳಿತ ವೈಫಲ್ಯ ಖಂಡಿಸಿ ಹಾಗೂ ಕುಡಿಯುವ ನೀರಿಗೆ ಆಗ್ರಹಿಸಿ ಕೊಡತಾಳು ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಬೀಗ ಜಡಿದ ಘಟನೆ ಬುಧವಾರ ನಡೆಯಿತು.

ಸವಳಂಗ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಕೊಡತಾಳು ಮತ್ತು ಮಾಚಿಗೊಂಡನಹಳ್ಳಿ ಗ್ರಾಮಗಳಿಗೆ ಕೆಲವು ತಿಂಗಳಿನಿಂದ ಸಮರ್ಪಕ ಕುಡಿಯುವ ನೀರು ಒದಗಿಸಿಲ್ಲ. ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕೇಳಿದ ಮಾಹಿತಿಯನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಅಪಾದಿಸಿ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಸವಳಂಗ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರ ಸಮಸ್ಯೆ ಕೇಳಲು ಕಚೇರಿಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಇಲ್ಲದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಬೀಗ ಜಡಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ರುದ್ರೇಶ ಕೊಡತಾಳ್ ಮಾತನಾಡಿ, ಸವಳಂಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಕಳೆದ ಎರಡು ತಿಂಗಳಿನಿಂದ ಮಾಹಿತಿ ಕೇಳಿದರೆ ಒದಗಿಸಿಲ್ಲ. ನಡೆಯದೆ ಇರುವ ಕಾಮಗಾರಿಗಳಿಗೆ ಈಗಾಗಲೇ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.

ಸಿದ್ದೇಶ್, ಕೊಡತಾಳು ರಾಜಪ್ಪ, ಮಲ್ಲಿಕಪ್ಪ, ಪರಮೇಶ್ವರಪ್ಪ, ಶಿವು ಮಾಚಿಗೊಂಡನಹಳ್ಳಿ, ಸಿ. ಚಂದ್ರಪ್ಪ, ಪಾರ್ವತಮ್ಮ, ಜಯಮ್ಮ, ರುದ್ರಮ್ಮ, ಕಮಲಮ್ಮ ಹಾಗೂ ಕೊಡತಾಳು-ಮಾಚಿಗೊಂಡನಹಳ್ಳಿ ಗ್ರಾಮಸ್ಥರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸವಳಂಗ ಗ್ರಾ.ಪಂ. ಅಧ್ಯಕ್ಷ ಕೆ. ಲೋಕೇಶಪ್ಪ ಪ್ರತಿಕ್ರಿಯೆ ನೀಡಿ, ವಿದ್ಯುತ್ ಅಭಾವದಿಂದ ನೀರಿನ ಸಮಸ್ಯೆ ಉಂಟಾಗಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿರುವ ಮಾಹಿತಿಯನ್ನು ಶೀಘ್ರ ಒದಗಿಸಲಾಗುವುದು ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.