ADVERTISEMENT

ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 19:59 IST
Last Updated 22 ಫೆಬ್ರುವರಿ 2013, 19:59 IST
ಲಕ್ಕೇನಹಳ್ಳಿ ಹಾಗೂ ರಂಗನಾಥಪುರ ಗ್ರಾಮಗಳ ದಲಿತ ಕಾಲೊನಿಗಳಿಗೆ ನೀರು ಪೂರೈಸಬೇಕೆಂದು ಒತ್ತಾಯಿಸಿ  ಅಲ್ಲಿನ ನಿವಾಸಿಗಳು ಗುಬ್ಬಿಯಲ್ಲಿ  ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟಿಸಿದರು
ಲಕ್ಕೇನಹಳ್ಳಿ ಹಾಗೂ ರಂಗನಾಥಪುರ ಗ್ರಾಮಗಳ ದಲಿತ ಕಾಲೊನಿಗಳಿಗೆ ನೀರು ಪೂರೈಸಬೇಕೆಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಗುಬ್ಬಿಯಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟಿಸಿದರು   

ಗುಬ್ಬಿ:  ಎರಡು ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ನೀರು ಪೂರೈಕೆಗೆ ಶೀಘ್ರ ಗಮನ ಹರಿಸಿ ಎಂದು ಒತ್ತಾಯಿಸಿ ತಾಲ್ಲೂಕಿನ ಲಕ್ಕೇನಹಳ್ಳಿ ಹಾಗೂ ರಂಗನಾಥಪುರ ಗ್ರಾಮಗಳ ದಲಿತರು ಶುಕ್ರವಾರ ಇಲ್ಲಿ ಪ್ರತಿಭಟಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಬೀಗ ಜಡಿದ ಸಾರ್ವಜನಿಕರು ನೀರು ಪೂರೈಸುವಂತೆ ಕೋರಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಎರಡು ತಿಂಗಳಿನಿಂದ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಾಸಕರು ಜಿ.ಪಂ. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಗ್ರಾಮದ ಕುಡಿಯುವ ನೀರು ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಹೊಸ ಕೊಳವೆ ಬಾವಿ ಕೊರೆಯಬೇಕೆಂಬ ಶಾಸಕರ ಸೂಚನೆಗೂ ಕಿಮ್ಮತ್ತು ಸಿಕ್ಕಿಲ್ಲ ಎಂದು ಆರೋಪಿಸಿದರು.

ಕಚೇರಿಯಲ್ಲಿ ಅಧಿಕಾರಿಗಳನ್ನು ಕಂಡು ಸಮಸ್ಯೆ ಮನವರಿಕೆ ಮಾಡಿಕೊಡಲು ಹೋದರೆ ಅಲ್ಲಿ ಸಿಬ್ಬಂದಿಯೇ ಇರುವುದಿಲ್ಲ ಎಂದು ದಲಿತರು ತಮ್ಮ ನೋವು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಸಬ್‌ಇನ್‌ಸ್ಪೆಕ್ಟರ್ ಮುನಿರಾಜು ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ಮ್ಯೋನೇಜರ್ ಲಕ್ಷ್ಮೀನಾರಾಯಣ್ ಸಮಸ್ಯೆಯನ್ನು ಆಲಿಸಿ ಇನ್ನು ಮೂರು ದಿನಗಳಲ್ಲಿ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ತಾಲ್ಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ದುರ್ಗೇಶ್, ಗ್ರಾ.ಪಂ. ಸದಸ್ಯೆ ಮಂಜುಳಮ್ಮ, ಗ್ರಾ.ಪಂ. ಮಾಜಿ ಸದಸ್ಯ ದೊಡ್ಡರಂಗಯ್ಯ, ಗ್ರಾಮಸ್ಥರಾದ ಪುಟ್ಟಮ್ಮ, ಲಕ್ಷ್ಮಮ್ಮ, ಮಾಲಮ್ಮ, ಸಿದ್ಧಾರ್ಥ, ಎಚ್.ಬಿ.ಕೃಷ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.