ADVERTISEMENT

ಕೃಷಿ ಲಾಭದಾಯಕ, ಭೂಮ್ತಾಯಿ ಕೈಹಿಡೀತಾಳೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಮಂಡ್ಯ: `ಕೃಷಿ ಮಾಡಿದ್ರೆ ನಷ್ಟ, ನಷ್ಟ ಅಂಥ ಹೆಚ್ಚಿನ ಜನ ಹೇಳ್ತಾರೆ. ಆದ್ರೆ ನಾನೀದನ್ನ ಒಪ್ಪೋದಿಲ್ಲ. ನಾನೋಬ್ಬ ರೈತ್ನಾಗಿ ಹೇಳ್ತೇನೆ ನಿಜವಾಗ್ಲೂ ಕೃಷಿ ಲಾಭದಾಯಕ. ನಮ್ ಕೆಲಸಾನ ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ಮಾಡಿದ್ರೆ. ನಿಜವಾಗ್ಲೂ ಭೂಮ್ ತಾಯಿ ಕೈ ಹಿಡಿತಾಳೆ...~

ನಗರದಲ್ಲಿ ಮಂಗಳವಾರ ಆಕಾಶವಾಣಿ ಹಬ್ಬ ನಿಮಿತ್ತ ಆಯೋಜಿಸಿದ್ದ ~ಕೃಷಿ ವೈಭವ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಚಾಮರಾಜನಗರ ಜಿಲ್ಲೆ ನಾಗವಳ್ಳಿ ಗ್ರಾಮದ ಪ್ರಗತಿಪರ ರೈತ ಸಯ್ಯದ್ ನಾಸಿರ್ ಅಹಮದ್ ಹೇಳಿದ ಮಾತಿದು.

ಆಕಾಶವಾಣಿ ಕಾರ್ಯಕ್ರಮಗಳು ರೈತರಿಗೆ ಉಪಯುಕ್ತ,. ಜ್ಞಾನವನ್ನೂ ನೀಡಿದೆ. ಸಾಧಕ ರೈತರನ್ನು ಪರಿಚಯಿಸುವ ಮೂಲಕ ಇತರ ರೈತರಿಗೆ ಉತ್ತೇಜನ ನೀಡಿದೆ. ಇಂಥ ಕಾರ್ಯಕ್ರಮಗಳಿಂದಲೇ ನಾನು ಸಾಕಷ್ಟು ಕಲಿತಿದ್ದೇನೆ, ಲಾಭದಾಯಕ ಹಾದಿಯಲ್ಲಿ ಮುನ್ನಡೆದಿದ್ದೇನೆ ಎಂದು ಹೇಳಿದರು.

ಲಾಭವಾಗಲಿಲ್ಲ!: ಸರ್ಕಾರ ರೈತರಿಗೆ ಅಂಥ ಹಲವು ಕಾರ್ಯಕ್ರಮ ರೂಪಿಸುತ್ತದೆ. ಅದರಲ್ಲಿ ರೈತರ ಪ್ರವಾಸವೂ ಒಂದು. ಈ ಹಿಂದೆ ನಮ್ಮನ್ನು ಚೀನಾಕ್ಕೆ ಕರದೊಯ್ಯಲಾಗಿತ್ತು. ಅಲ್ಲಿ, ನಮ್ಗೆ ಕೃಷಿ ಬಗ್ಗೆ ಜ್ಞಾನ ಸಿಗಲಿಲ್ಲ. ಅಲ್ಲಿನ ಕೆಲ ಸ್ಥಳಗಳಿಗೆ ಭೇಟಿ ನೀಡಿ ವಾಪಸ್ಸು ಕರೆದುಕೊಂಡು ಬಂದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮೈಸೂರು ಆಕಾಶವಾಣಿಯ ನಿರ್ದೇಶಕಿ ಡಾ. ಎಂ.ಎಸ್.ವಿಜಯಾ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸಿಇಒ ಜಿ.ಜಯರಾಂ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ವಿಷಕಂಠ, ಮೈಸೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.