ADVERTISEMENT

ಕೈಕೊಟ್ಟ ಮುಂಗಾರು ಪೂರ್ವ ಮಳೆ: ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಹಿನ್ನಡೆ

ಅದಿತ್ಯ ಕೆ.ಎ.
Published 25 ಮೇ 2012, 19:30 IST
Last Updated 25 ಮೇ 2012, 19:30 IST
ಕೈಕೊಟ್ಟ ಮುಂಗಾರು ಪೂರ್ವ ಮಳೆ: ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಹಿನ್ನಡೆ
ಕೈಕೊಟ್ಟ ಮುಂಗಾರು ಪೂರ್ವ ಮಳೆ: ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಹಿನ್ನಡೆ   

ಜಿಲ್ಲಾ ವಿಶೇಷ ವರದಿ:

ದಾವಣಗೆರೆ: ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರ ಮೊಗದಲ್ಲಿ ಮುಂಗಾರು ಪೂರ್ವ ಮಳೆ ಆಶಾಭಾವನೆ ತುಂಬಿ, ಹೊಲದತ್ತ ಮುಖ ಮಾಡುವಂತೆ ಮಾಡಿತ್ತು. ಆದರೆ, ಹದಿನೈದು- ಇಪ್ಪತ್ತು ದಿನಗಳಿಂದ ಬಿತ್ತನೆಗೆ ಅಗತ್ಯವಿರುವ ಮುಂಗಾರು ಮಳೆ ಕಣ್ಮರೆಯಾಗಿದೆ. ಇದರಿಂದ ಅನ್ನದಾತ ಮತ್ತೆ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾನೆ.

ಜಿಲ್ಲೆಯಲ್ಲಿ ಏಪ್ರಿಲ್ ಕೊನೆ ಹಾಗೂ ಮೇ ಮೊದಲ ವಾರದಲ್ಲಿ ಬಿದ್ದ ಮಳೆಗೆ ಅಲ್ಪ ಪ್ರಮಾಣದಲ್ಲಿ ಬಿತ್ತನೆ ಚಟುವಟಿಕೆಗಳು ನಡೆದಿದ್ದವು. ಪ್ರಸಕ್ತ ವರ್ಷ 3.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈಗಾಗಲೇ, 6,065 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ.

ಬಿತ್ತನೆ ಮಾಡಿದ ರೈತರು ಮುಗಿಲು ನೋಡುತ್ತಿದ್ದಾರೆ. ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಬಿತ್ತನೆಬೀಜ ಮೇಲೆದ್ದಿಲ್ಲ. ಮಳೆ ಬಂದುಹೋದ ಮೇಲೆ ಹೊಲದಲ್ಲಿ ಉಷ್ಣಾಂಶ ಇನ್ನೂ ಹೆಚ್ಚಾಗಿದೆ. ಉಷ್ಣಾಂಶಕ್ಕೆ ಬಿತ್ತನೆ ಮಾಡಿರುವ ಹೊಲದಲ್ಲಿ ಬಿತ್ತನೆ ಬೀಜ ಒಳಗೆ ಮುರುಟುತ್ತಿವೆ ಎಂದು ರೈತರು `ಪ್ರಜಾವಾಣಿ~ ಎದುರು ಅಳಲು ತೋಡಿಕೊಂಡರು.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜೂನ್‌ನಲ್ಲಿ ಅಧಿಕ ಮಳೆ ಸುರಿದರೆ ಬಿತ್ತನೆ ಮಾಡಲು ಕಡು ಕಷ್ಟ. ಕಳೆ-ಬೆಳೆ ಒಟ್ಟಿಗೆ ಹುಟ್ಟಬಹುದು. ಆಗ ಕಳೆ ಬೇರ್ಪಡಿಸುವುದು ದುಸ್ತರ. ಮೇ ತಿಂಗಳಲ್ಲಿ ಬಿತ್ತನೆಗೆ ಒಳ್ಳೆಯ ಹಂಗಾಮು. ಆದರೆ, ವರುಣದೇವ ಕೃಪೆ ತೋರುತ್ತಿಲ್ಲ ಎಂದು ಹೊನ್ನಾಳಿ ತಾಲ್ಲೂಕಿನ ರೈತ ರುದ್ರೇಶ್ ಅಲವತ್ತುಕೊಂಡರು.

ಕಳೆದ ವರ್ಷ ಬರದ ದವಡೆಗೆ ಸಿಕ್ಕ ಜಿಲ್ಲೆಯ ರೈತರು ಬಿತ್ತನೆಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆಬೀಜ ಸಂಗ್ರಹಿಸಿದ್ದಾರೆ. ಭೂಮಿಯನ್ನು ಉಳುಮೆ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದರೂ ಮಳೆ ಇಲ್ಲ. ಕೆಲವು ಬೆಳೆ ಇನ್ನೂ ಭೂಮಿಯನ್ನು ಸೋಕಿಲ್ಲ. ವಾಡಿಕೆಯಂತೆ ಮೇ ಪೂರ್ತಿ ಸಾಧಾರಣ ಮಳೆ ನಡೆಸಿದ್ದರೂ ಸಾಕು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಚಟುವಟಿಕೆಗಳು ಗರಿಗೆದರುತ್ತಿದ್ದವು ಎನ್ನುತ್ತಾರೆ ಕೃಷಿಕರು.

ಇದುವರೆಗೂ ಊಟದಜೋಳ 95 ಹೆಕ್ಟೇರ್, ಎಳ್ಳು 190 ಹೆಕ್ಟೇರ್, ನೆಲಕಡಲೆ 10 ಹೆಕ್ಟೇರ್, ಸೂರ್ಯಕಾಂತಿ 30, ಬಿಟಿ ಹತ್ತಿ 5,682 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಗಿ, ಗೋಧಿ, ಅವರೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಪ್ರಮಾಣ ಮಾತ್ರ ಶೂನ್ಯ!

ಜೂನ್‌ನಲ್ಲಿ ಹದಗೊಂಡು ಮಳೆ ಸುರಿದರೆ ವ್ಯಾಪಕವಾಗಿ ಬಿತ್ತನೆ ಆಗಲಿದೆ. ಮಳೆ ಜಡಿಹಿಡಿದರೆ ಬಿತ್ತನೆಗೆ ಕಷ್ಟ. ಈಗಲೇ ಬಿತ್ತನೆ ಮಾಡಿದ್ದರೆ ಜೂನ್‌ನಲ್ಲಿ ಬೀಳುವ ಮಳೆಗೆ ಕಳೆ ಕಿತ್ತು, ಗೊಬ್ಬರ ಹಾಕಲು ಅನುಕೂಲವಾಗುತ್ತಿತ್ತು ಎನ್ನುತ್ತಾರೆ ರೈತರು.

`ಈಗಾಗಲೇ ಜಿಲ್ಲೆಯಲ್ಲಿ ಬಿಟಿಹತ್ತಿಬೆಳೆ ಹೆಚ್ಚಾಗಿ ಮಾಡಿದ್ದಾರೆ. ಅದಕ್ಕೆ ಮಳೆಯ ಅಗತ್ಯವಿತ್ತು. ನೀರಾವರಿ ಪ್ರದೇಶದಲ್ಲಿ ಬಿತ್ತನೆ ಆಗಿರುವ ಕಡೆ ಏನೂ ಸಮಸ್ಯೆಯಿಲ್ಲ. ವಾಡಿಕೆಯಂತೆ ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ ಹೆಚ್ಚಿನ ಭಾಗ ಬಿತ್ತನೆ ಮುಕ್ತಾಯಗೊಳ್ಳುತ್ತಿತ್ತು. ಬಿತ್ತನೆ ಮಾಡಿರುವ ರೈತರು ಗೊಬ್ಬರ ಹಾಕುವಾಗ ತುಂಬಾ ಸಂಯಮದಿಂದ ವರ್ತಿಸಬೇಕು~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.