ADVERTISEMENT

ಕೊಡಗು ಜಿಲ್ಲೆ: 28 ವಾಂತಿಭೇದಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 18:35 IST
Last Updated 21 ಜೂನ್ 2012, 18:35 IST

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ, ನಂಜರಾಯಪಟ್ಟಣ, ಬಸವನಹಳ್ಳಿ, ದೊಡ್ಡ ಹೊಸೂರು, ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಂತಿಭೇದಿ ಪ್ರಕರಣಗಳು ವರದಿಯಾಗುತ್ತಿದ್ದು, ಗುರುವಾರ ಮತ್ತೆ ಇಬ್ಬರು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಗೆ ವಾಂತಿಭೇದಿಯಿಂದ 28 ಮಂದಿ ದಾಖಲಾಗಿದ್ದಾರೆ. 

ವಾಂತಿಭೇದಿಯಿಂದ ತೀವ್ರ ಅಸ್ವಸ್ಥಗೊಂಡ ಕುಶಾಲನಗರ ಸಮೀಪದ ಬಸವನಹಳ್ಳಿಯ ಮಮತ (6) ಮತ್ತು ದೊಡ್ಡ ಹೊಸೂರಿನ ಪ್ರಕಾಶ್ (22) ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಬಸವನಹಳ್ಳಿ ಗಿರಿಜನ ಹಾಡಿಯಲ್ಲಿ ವಾಂತಿಭೇದಿಯಿಂದ 11 ವರ್ಷದ ಮಂಜುಳ ಸಾವನ್ನಪ್ಪಿದ್ದಾಳೆ.

ಕುಶಾಲನಗರದ ಸುತ್ತಮುತ್ತಲಿನ 7ನೇ ಹೊಸಕೋಟೆ, ಕೊಪ್ಪ, ಬಸವನಹಳ್ಳಿ, ನಂಜರಾಯಪಟ್ಟಣದಲ್ಲಿ ವಾಂತಿಭೇದಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಹಲವು ಜನರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದ್ದು,  ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಮೈಸೂರು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ನಂಜರಾಯಪಟ್ಟಣದಲ್ಲಿ ಪೂರೈಕೆಯಾಗುತ್ತಿದ್ದ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಕಲ್ಮಶ ಕಂಡುಬಂದ ಹಿನ್ನೆಲೆಯಲ್ಲಿ ಈ ನೀರಿನ ಪೂರೈಕೆಯನ್ನು ನಿಲ್ಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.