ADVERTISEMENT

ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:10 IST
Last Updated 23 ಫೆಬ್ರುವರಿ 2011, 17:10 IST

ಕೋಲಾರ: ಕುಡಿಯುವ ನೀರಿನ ಸಮಸ್ಯೆ ಕುರಿತು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ತುರ್ತು ವಿಶೇಷ ಸಭೆಗೆ ಬಂದ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಮುಖ್ಯಬಾಗಿಲಲ್ಲೇ ತಡೆದ ದಲಿತ ಮುಖಂಡರು, ಮುಳಬಾಗಲು ದಲಿತ ಮುಖಂಡ ರಾಮಕೃಷ್ಣಪ್ಪ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ ಘಟನೆ ಬುಧವಾರ ನಡೆಯಿತು.

ಬೆಳಿಗ್ಗೆ 11.30ರ ವೇಳೆಗೆ ಜಿ.ಪಂ. ಆವರಣಕ್ಕೆ ಬಂದ ಸಚಿವರನ್ನು ಅಡ್ಡಗಟ್ಟಿದ ಪ್ರಮುಖರಾದ ವಿಜಯಕುಮಾರ್, ಆವಣಿ ಕಾಶಿ, ಚಂದ್ರಶೇಖರ್ ಮತ್ತಿತರರು, ಕೊಲೆ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ದಲಿತ ಸಮುದಾಯದವರೊಬ್ಬರ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಚಿವರು, ಸಭಾಂಗಣಕ್ಕೆ ಬಂದು ಸಭೆಯನ್ನು ಆರಂಭಿಸಬೇಕೆಂಬಷ್ಟರಲ್ಲೆ ಮತ್ತೆ ಅಲ್ಲಿಗೆ ಬಂದ ಮುಖಂಡರು, ಪ್ರಕರಣದ ಕುರಿತು ತಮ್ಮೊಡನೆ ಈಗಲೇ ಚರ್ಚಿಸಬೇಕು ಎಂದು ಹಠ ಹಿಡಿದರು.

ಮುಖಂಡರ ವರ್ತನೆಗೆ ಕೋಪ ಪ್ರದರ್ಶಿಸಿದ ಸಚಿವರು, ನಿಮಗೆ ಮಾತು ಬೇಕೋ? ಕ್ರಮ ಕೈಗೊಳ್ಳುವುದು ಬೇಕೋ? ಎಂದು ನಿಷ್ಠುರವಾಗಿ ಪ್ರಶ್ನಿಸಿದರು. ಸಭೆ ನಡೆದ ಬಳಿಕ ನಿಮ್ಮೊಡನೆ ಚರ್ಚಿಸುವೆ. ಈಗ ಸಭೆ ನಡೆಸಬೇಕಾಗಿದೆ ಎಂದರು. ಅವರ ಮಾತಿಗೆ ಬಗ್ಗಿದ ಮುಖಂಡರು ಸಭಾಂಗಣದಿಂದ ಹೊರಗೆ ನಡೆದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT