ADVERTISEMENT

ಕೋಟಿ ಕೋಟಿ ಆಮಿಷ ತನಿಖೆಯಾಗಲಿ– -ಆಗ್ರಹ

ವಿಶ್ವಾಸಮತದಲ್ಲಿ ಬಿಜೆಪಿ ವಿಫಲ; ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 11:20 IST
Last Updated 20 ಮೇ 2018, 11:20 IST

ಪುತ್ತೂರು : ‘ಸ್ವಚ್ಛ ಭಾರತ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷದ ಶಾಸಕರು ಮತ್ತು ನಾಯಕರು ₹100 ಕೋಟಿ, ₹150 ಕೋಟಿಯ ಆಮಿಷ ಒಡ್ಡುತ್ತಿದ್ದು,  ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತಿದ್ದೇವೆ’ ಎಂದು ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ ರಾಜೀನಾಮೆ ಸಲ್ಲಿಸಿದ ಪ್ರಯುಕ್ತ ಜೆಡಿಎಸ್ ಕಾರ್ಯಕರ್ತರು ಕೋರ್ಟ್‌ ರಸ್ತೆಯ ಮಾರುಕಟ್ಟೆ ಬಳಿ ಶನಿವಾರ ಸಂಜೆ ನಡೆಸಿದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಮುಖಂಡ ಗದಾಧರ ಗೌಡ ಮಲ್ಲಾರ ಅವರು ಮಾತನಾಡಿ, ‘ಕಲಿಯುಗದಲ್ಲಿ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಶ್ರೀರಾಮ ಎದ್ದು ಬಂದಂತೆ ರಾಜ್ಯದಲ್ಲಿದ್ದ ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸಮೂಹ ನಡೆಸಿದ ಹೋರಾಟದಿಂದ ಸಾಧ್ಯವಾಗಿದೆ’ ಎಂದರು.

ADVERTISEMENT

‘ಮುಂದೆ ರಾಜ್ಯದಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದು, ಬಡವ ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಎಲ್ಲರಿಗೂ ಸಮಾನ ಸ್ಥಾನ ಮಾನ ದೊರೆಯುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ರೈತರು, ರಾಜ್ಯದ ಆರೂವರೆ ಕೋಟಿ ಜನರು ನೆಮ್ಮದಿಯ ಜೀವನ ನಡೆಸುವ ರೀತಿಯಲ್ಲಿ ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿ ಅವರು ಆಡಳಿತ ನಡೆಸಲಿದ್ದಾರೆ’; ಎಂದರು.

ಜೆಡಿಎಸ್ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಐ.ಸಿ ಕೈಲಾಸ್ , ಮುಖಂಡರಾದ ಇಬ್ರಾಹಿಂ ಗೋಳಿಕಟ್ಟೆ, ಪದ್ಮಮಣಿ, ಶಿವು ಸಾಲಿಯಾನ್, ಮಹಾವೀರ ಜೈನ್, ನಝೀರ್ ಬಪ್ಪಳಿಗೆ, ಸುರೇಶ ಬಪ್ಪಳಿಗೆ, ಗಿರಿಧರ ನಾಕ್, ಹಂಝ ಕಬಕ, ಉಪೇಂದ್ರ ಸಂಟ್ಯಾರ್, ಹನೀಫ್ ಕೆದಂಬಾಡಿ, ಖಲಂದರ್ ಶರೀಫ್, ಚರಣ್ ಕೆದಂಬಾಡಿ, ಶೇಖರ ಕೆದಂಬಾಡಿ, ಆಸೀಫ್ ಸಾರೆಪುಣಿ, ಜಾಕೀರ್ ಸಾರೆಪುಣಿ, ಇಬ್ರಾಹಿಂ ಕಲ್ಲರ್, ಬಿ.ಎಲ್ ಚಂದ್ರಶೇಖರ್ ಅಂಚನ್  ಇದ್ದರು.

ಕಾಂಗ್ರೆಸ್-ಜೆಡಿಎಸ್ ಸಂಭ್ರಮಾಚರಣೆ

ಪುತ್ತೂರು: ವಿಧಾನಸಭೆಯಲ್ಲಿ ಶನಿವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆಗೆ ಮುಂದಾಗದೆ ರಾಜೀನಾಮೆ ನೀಡಿದ್ದನ್ನು ಸ್ವಾಗತಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಶನಿವಾರ ಜಂಟಿಯಾಗಿ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ‘ಇಂದು ನಮ್ಮ ಪಾಲಿಗೆ ಸುದಿನವಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ರಾಜ್ಯಪಾಲರು ಕೈಗೊಂಡಿದ್ದ ನಿರ್ಧಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ ದೇಶದಲ್ಲಿ ನ್ಯಾಯವಿದೆ ಎಂಬ ಸಂದೇಶವನ್ನು ಸಾರಿದೆ. ಇದು ನ್ಯಾಯಕ್ಕೆ ಸಿಕ್ಕಿದ ಜಯ. ಸುಪ್ರೀಂ ಕೋರ್ಟ್‌ನ ಆದೇಶದ ವಿಜಯ, ಸಂವಿಧಾನದ ವಿಜಯೋತ್ಸವ ಆಗಿದೆ’ ಎಂದರು.

ಬಿಹಾರ ,ಗೋವಾ, ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದ್ದರೂ ಸರ್ಕಾರ ರಚಿಸಲು ಅವಕಾಶ ಮಾಡಿಕೊಡದ ಬಿಜೆಪಿ, ರಾಜ್ಯದಲ್ಲಿ ಯಾವ ರೀತಿಯಲ್ಲಾದರೂ ಅಧಿಕಾರ ಪಡೆಯುವ ಕನಸು ಕಂಡಿತ್ತು. ನೂರು, ಇನ್ನೂರು ಕೋಟಿ ಹಣದ ಆಮಿಷ ಒಡ್ಡಿತ್ತು. ಆದರೆ ಕಾಂಗ್ರೆಸ್, ಜೆಡಿಎಸ್ ಮತ್ತು ಇಬ್ಬರು ಪಕ್ಷೇತರ ಸದಸ್ಯರು ಆಮಿಷಕ್ಕೆ ಒಳಗಾಗಲಿಲ್ಲ. ಅವರನ್ನು ನಾವು ಅಭಿನಂಧಿಸಬೇಕಾಗಿದೆ ಎಂದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿದೆ ಎನ್ನುವುದಕ್ಕೆ ಸುಪ್ರೀಂ ಕೋರ್ಟ್‌ನ ಆದೇಶವೇ ಸಾಕ್ಷಿ. ಸುಪ್ರೀಂ ಕೋರ್ಟ್‌ ಬಿಜೆಪಿಗೆ ‘ಕುದುರೆ ವ್ಯಾಪಾರ’ ನಡೆಸಲು ಅವಕಾಶ ಮಾಡಿಕೊಡದೆ ನಮಗೆ ನ್ಯಾಯ ನೀಡಿದೆ ಎಂದರು.

ರಾಜ್ಯದಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಲಿದ್ದು, 5 ವರ್ಷಗಳ ಕಾಲ ಆಡಳಿತ ನಡೆಸಲಿದೆ. ರೈತರ ಸಾಲ ಮನ್ನಾ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಲಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಮಾರಪ್ಪ ಶೆಟ್ಟಿ, ಬಾಲಕೃಷ್ಣ ರೈ ನೆಲ್ಲಿಕಟ್ಟೆ, ಸೂಫಿ ಬಪ್ಪಳಿಗೆ, ಮೂಸಕುಂಞಿ ಬಪ್ಪಳಿಗೆ, ದೀಪಕ್ ನೆಲ್ಲಿಕಟ್ಟೆ, ಸುರೇಶ್ ನಾಯ್ಕ್, ಜೆಡಿಎಸ್ ಮುಖಂಡ ಗೋಳಿಕಟ್ಟೆ ಇಬ್ರಾಹಿಂ, ಅದ್ದು ಪಡೀಲು, ಕರೀಂ ಪಳ್ಳತ್ತೂರು, ಇಬ್ರಾಹಿಂ ಪರ್ಪುಂಜ, ನಝೀರ್ ಬಲ್ನಾಡು  ಇದ್ದರು.

ಮೂಲ್ಕಿ ಕಾಂಗ್ರೆಸ್ ಸಂಭ್ರಮ

ಮೂಲ್ಕಿ: ‘ಬಹುಮತದ ಜನಾದೇಶ ಪಡೆಯದೇ, ಅಕ್ರಮವಾಗಿ ಸರ್ಕಾರವನ್ನು ರಚಿಸಲು ಮುಂದಾಗಿರುವ ಬಿಜೆಪಿಯ ಯಡಿಯೂರಪ್ಪ ಅವರು ಎಲ್ಲರ ನಿರೀಕ್ಷೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ರಾಜ್ಯದ ಜನರು ಮುಕ್ತವಾಗಿ ಸ್ವಾಗತಿಸಿದ್ದಾರೆ’ ಎಂದು ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್ ಹೇಳಿದರು.

ಬಿಜೆಪಿ ಸರ್ಕಾರವು ಪತನವಾದುದಕ್ಕೆ  ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಶನಿವಾರ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭ್ರಮ ಆಚರಿಸಿ ಅವರು ಮಾತನಾಡಿದರು.

ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಮಾಜಿ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಖಾದರ್, ಹೆಚ್. ಹಮೀದ್, ಅನಿಲ್ ಸಸಿಹಿತ್ಲು, ಚಂದ್ರಕುಮಾರ್ ಸಸಿಹಿತ್ಲು, ಅಬ್ದುಲ್ ಅಜೀಜ್, ಪ್ರವೀಣ್‌ಕುಮಾರ್, ಮಾಲತಿ ಡಿ. ಕೋಟ್ಯಾನ್, ಬಶೀರ್ ಸಾಗ್, ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಶೀರ್ ಕುಳಾಯಿ, ಕಾಂಗ್ರೆಸ್ ನಾಯಕರಾದ ಸಾಹುಲ್ ಹಮೀದ್, ಸವಿತಾ ಶರತ್ ಪಡುಪಣಂಬೂರು, ಧನರಾಜ್ ಕೋಟ್ಯಾನ್ ಸಸಿಹಿತ್ಲು, ಶಮೀರ್ ಕಾರ್ನಾಡು, ದಿನೇಶ್ ಬೆಳ್ಳಾಯರ, ರಜಾಕ್ ಕದಿಕೆ, ಚಿರಂಜೀವಿ ಅಂಚನ್, ಹುಸೇನಬ್ಬ ಬೊಳ್ಳೂರು, ವಾಮನ ಇಂದಿರಾನಗರ  ಇದ್ದರು.

ಕಾಂಗ್ರೆಸ್ ವಿಜಯೋತ್ಸವ

ಉಪ್ಪಿನಂಗಡಿ:  ಬಿ.ಎಸ್. ಯಡಿಯೂರಪ್ಪ ನೇತೃತ್ವದ  ಬಿಜೆಪಿ ಸರ್ಕಾರ ಶನಿವಾರ ಸಂಜೆ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಬೈಕ್ ರ‍್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಯು.ಟಿ. ತೌಶೀಫ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಬ್ಬೀರ್ ಕೆಂಪಿ ನೇತೃತ್ವದಲ್ಲಿ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೈಕ್ ರ‍್ಯಾಲಿ  ಗಾಂಧಿಪಾರ್ಕು, ಹಿರೇಬಂಡಾಡಿ, ಗಂಡಿಬಾಗಿಲು, ಕೊಯಿಲ, ಪೆರಿಯಡ್ಕ, ಹಳೇಗೇಟು ಮೂಲಕ ಮತ್ತೆ ಉಪ್ಪಿನಂಗಡಿಯಲ್ಲಿ  ಸಮಾಪನಗೊಂಡಿತು.

**
 ಸ್ವಚ್ಚ ಭಾರತ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷದ ಶಾಸಕರು ಮತ್ತು ನಾಯಕರು 100 ಕೋಟಿ,150 ಕೋಟಿಯ ಆಮಿಷ ಒಡ್ಡುತ್ತಿದ್ದು, ಇಷ್ಟೊಂದು ಮೊತ್ತದ ಹಣ ಅವರಿಗೆ ಎಲ್ಲಿಂದ ಬಂತು ಎಂಬುವುದನ್ನು ನಾವು ಬಿಜೆಪಿಯವರಲ್ಲಿ ಕೇಳಬೇಕಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.