ADVERTISEMENT

ಕೋಲಾರ: ಈ ಬಾರಿಯೂ ಹೆಚ್ಚು ಮಾವು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST
ಕೋಲಾರ: ಈ ಬಾರಿಯೂ ಹೆಚ್ಚು ಮಾವು ನಿರೀಕ್ಷೆ
ಕೋಲಾರ: ಈ ಬಾರಿಯೂ ಹೆಚ್ಚು ಮಾವು ನಿರೀಕ್ಷೆ   

ಕೋಲಾರ: `ಹಣ್ಣುಗಳ ರಾಜ~ ಮಾವಿಗೆ ಈ ಬಾರಿ ಕಡಿಮೆ ಇಳುವರಿಯ ವರ್ಷ. ಆದರೆ, ರಾಜ್ಯದಲ್ಲೆ ಅತ್ಯಂತ ಹೆಚ್ಚು ಮಾವನ್ನು ಬೆಳೆಯುವ ಜಿಲ್ಲೆಯ ಮಾವಿನ ತೋಟಗಳಲ್ಲಿ ಭರ್ತಿಯಾಗಿ ಹೂವು ಅರಳಿವೆ. ನಿರೀಕ್ಷೆ ಮೀರಿ ಇಳುವರಿ ಹೆಚ್ಚಾಗುವ ಸಂಭವವಿದೆ.

ಮಳೆಯ ಏರುಪೇರಿನ ಪರಿಣಾಮವಾಗಿ ಮಾವಿನ ಕಾಲ (ಸೀಸನ್) ವಿಸ್ತರಣೆಯಾಗುತ್ತಿದೆ. ಹೀಗಾಗಿ ಹೂಬಿಡುವ ಪ್ರಕ್ರಿಯೆ ಡಿಸೆಂಬರ್‌ನಲ್ಲಿ ಶುರುವಾಗುವ ಬದಲು ಜನವರಿಯಲ್ಲಿ ಶುರುವಾಗುತ್ತಿದೆ. ಫೆಬ್ರುವರಿ ಕೊನೆವರೆಗೂ ಹೂ ಅರಳುತ್ತವೆ. ಹೂ ಬಿಡುವ ಎರಡು ತಿಂಗಳು ಮುನ್ನ ಒಣ ವಾತಾವರಣ ಅಗತ್ಯ.
 
ಆದರೆ ಹಿಂಗಾರು ಮಳೆಗಾಲವೂ ವಿಸ್ತರಣೆಯಾಗಿರುವುದರಿಂದ ತೇವಾಂಶ ಉಳಿದಿರುತ್ತದೆ. ಹೀಗಾಗಿ ಹೂ ಬಿಡುವುದು ವಿಳಂಬವಾಗುತ್ತಿದೆ.

ಪ್ರತಿ ಬಾರಿ ಏಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದ ಹೊತ್ತಿಗೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಈ ಬಾರಿ ಮೇ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯೇ ಹೆಚ್ಚಿದೆ.

ಇಳುವರಿ ಹೆಚ್ಚು:  ಈ ಬಾರಿಯೂ ಮಾವಿನ ಇಳುವರಿ ಹೆಚ್ಚಾಗಲಿದೆ ಎಂಬುದೇ ವಿಶೇಷ. ಒಂದು ವರ್ಷ ಪೂರ್ಣ ಮತ್ತು ಮತ್ತೊಂದು ವರ್ಷ ಕಡಿಮೆ ಇಳುವರಿ ನೀಡುವುದು ಮಾವಿನ ಪ್ರವೃತ್ತಿ. `2010ರಲ್ಲಿ ಅರ್ಧ ಇಳುವರಿ ದೊರೆತಿತ್ತು. 2011 -ಮಾವಿಗೆ ಪೂರ್ಣ ಇಳುವರಿಯ (ಆನ್ ಈಯರ್ ಬ್ಲೂಮಿಂಗ್) ವರ್ಷ.

ಪ್ರಸ್ತುತ ವರ್ಷ ಕಡಿಮೆ ಇಳುವರಿಯ ವರ್ಷವಾದರೂ ಮಾವಿನ ತೋಟಗಳಲ್ಲಿ ಹೂವು ನಿರೀಕ್ಷೆ ಮೀರಿ ಅರಳಿವೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.

`ವೈಜ್ಞಾನಿಕ ವಿಶ್ಲೇಷಣೆಕಾರರೂ ಈ ಬಾರಿ ಮಾವು ಇಳುವರಿ ಹೆಚ್ಚು ಎಂದು ಭವಿಷ್ಯ ನುಡಿದಿದ್ದಾರೆ. ಯಾವುದೇ ಬೆಳೆಯ ಇಳುವರಿ ಪ್ರಮಾಣವನ್ನು ನಿರ್ಧರಿಸುವ ಇಂಗಾಲ ಮತ್ತು ಸಾರಜನಕ ಅನುಪಾತ (ಸಿಎನ್ ರೇಷಿಯೋ) ಈ ಬಾರಿ ಉತ್ತಮವಾಗಿದೆ. ಈಗ ಅರಳಿರುವ ಹೂವು ಎಷ್ಟೇ ಉದುರಿದರೂ ಇಳುವರಿಗೆ ಧಕ್ಕೆ ಇಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.

ಈ ಬಾರಿ ಅಲ್ಲಲ್ಲಿ ಜಿಗಿಹುಳು ಮತ್ತು ಬೂದಿರೋಗ ಕಾಣಿಸಿಕೊಂಡಿದೆ. ಅವುಗಳನ್ನು ನಿಯಂತ್ರಿಸಿದರೆ ಹೂ ಉದುರುವುದು ಕಡಿಮೆಯಾಗುತ್ತದೆ. ಉತ್ತಮ ಇಳುವರಿಯನ್ನೂ ಪಡೆಯಬಹುದು. ಆ ನಿಟ್ಟಿನಲ್ಲಿ ರೈತರಿಗೆ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

43,177 ಹೆಕ್ಟೇರ್: ಮಾವು ಬೆಳೆಯುವ ಪ್ರದೇಶದ ವಿಸ್ತೀರ್ಣವೂ ಜಿಲ್ಲೆಯಲ್ಲಿ ಹೆಚ್ಚಾಗಿದೆ. 2010ರಲ್ಲಿ 40,769 ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗಿತ್ತು. ಕಳೆದ ಬಾರಿ ಅದು 43,177 ಹೆಕ್ಟೇರ್ ಅಂದರೆ, 2,408 ಹೆಕ್ಟೇರ್‌ನಷ್ಟು ಹೆಚ್ಚಾಗಿತ್ತು. ಈಗಲೂ ಅಷ್ಟೇ ವಿಸ್ತೀರ್ಣದಲ್ಲಿ ಮಾವು ಹಬ್ಬಿದೆ.

ರಾಜ್ಯದಲ್ಲಿ ಬೆಳೆಯಲಾಗುವ ಮಾವಿನ ಪ್ರಮಾಣದಲ್ಲಿ (1,17,381 ಹೆಕ್ಟೇರ್) ಶೇ 47ಕ್ಕೂ ಹೆಚ್ಚು ಪ್ರದೇಶ ಕೋಲಾರ ಜಿಲ್ಲೆಯಲ್ಲಿದೆ. ಮಾವಿನ ಮಡಿಲು ಎಂದೇ ಖ್ಯಾತವಾದ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 22,325 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ.

ಮುಳಬಾಗಲು 11,670 ಹೆಕ್ಟೇರ್, ಬಂಗಾರಪೇಟೆ 3,461 ಹೆ, ಕೋಲಾರ 4,294 ಹೆ, ಮತ್ತು ಮಾಲೂರಿನ 1,427 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪೂರ್ಣ ಇಳುವರಿಯ ವರ್ಷವಾದ 2009ರಲ್ಲಿ  4,64,115 ಟನ್ ಮಾವು ಬೆಳೆಯಲಾಗಿತ್ತು. ಕಳೆದ ಬಾರಿ, ಪ್ರತಿ ಹೆಕ್ಟೇರ್‌ಗೆ 12 ಟನ್‌ನಂತೆ ಒಟ್ಟು 5,17,404 ಟನ್ ಫಸಲು ದೊರೆತಿತ್ತು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.