ADVERTISEMENT

ಕ್ರಮಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಶಿವಮೊಗ್ಗ: ನಗರದ ವಿವಿಧೆಡೆ ಷೋರೂಂಗಳು ರೈತರಿಗೆ ಕಳಪೆ ಗುಣಮಟ್ಟದ ಟ್ರ್ಯಾಕ್ಟರ್ ಮಾರಾಟ ಮಾಡಿ ವಂಚಿಸಿದ್ದು, ಅಂತಹ ಷೋರೂಂಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಕಾಲಕಾಲಕ್ಕೆ ಹೆಸರು ಬದಲಾಯಿಸಿ ನಗರದ ಬೇರೆ ಬೇರೆ ಕಡೆ ಷೋರೂಂ ತೆಗೆದು ಸುಮಾರು 20-25 ಮಿನಿ ಟ್ರ್ಯಾಕ್ಟರ್‌ಗಳನ್ನು ರೈತರಿಗೆ ಒಳ್ಳೆಯ ಗುಣಮಟ್ಟದ ಟ್ರ್ಯಾಕ್ಟರ್ ಎಂದು ಹೇಳಿ, ನಂಬಿಸಲಾಗಿದೆ. ಈ ಟ್ರ್ಯಾಕ್ಟರ್ ಮಾರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನ ಪಡೆಯಲಾಗಿದೆ. ಈಗ ಕೆಲವು ಷೋರೂಂ ಬಾಗಿಲು ಮುಚ್ಚಿರುವುದರಿಂದ ಈ ಟ್ರ್ಯಾಕ್ಟರ್‌ಗಳ ಬಿಡಿಭಾಗಗಳು ದೊರಕುತ್ತಿಲ್ಲ. ರಿಪೇರಿಗೆ ಮೆಕ್ಯಾನಿಕ್ ಕೂಡ ಇಲ್ಲ ಎಂದು ದೂರಿದರು.

ರೈತರ ದೂರಿನ ಮೇಲೆ ರಾಜ್ಯ ಸರ್ಕಾರ, ಕೃಷಿ ಇಲಾಖೆಯಿಂದ ತನಿಖೆ ನಡೆಸಿ ಅದು ಕಳಪೆ ಟ್ರ್ಯಾಕ್ಟರ್ ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಟ್ರ್ಯಾಕ್ಟರ್‌ನ್ನು ಕಪ್ಪುಪಟ್ಟಿಗೆ ಸೇರಿಸಿ, ಆದೇಶ ಮಾಡಿದೆ. ಬ್ಯಾಂಕ್‌ನಿಂದ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ ರೈತರು ಈಗ ಟ್ರ್ಯಾಕ್ಟರ್‌ಗಳನ್ನು ಮನೆಯ ಮುಂದೆ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಹಣ ವಾಪಸ್ ಕೊಡಿಸಲು ಸಾಧ್ಯವಾಗದಿದ್ದಲ್ಲಿ ಟ್ರ್ಯಾಕ್ಟರ್ ಮಾರಾಟಕ್ಕೆ ಅನುಮತಿ ಕೊಟ್ಟ ರಾಜ್ಯ ಮತ್ತ ಕೇಂದ್ರ ಸರ್ಕಾರ ರೈತರ ಟ್ರ್ಯಾಕ್ಟರ್ ಸಾಲಮನ್ನಾ ಮಾಡಬೇಕು ಎಂದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ, ಎಸ್. ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಡಿ.ಎಚ್. ರಾಮಚಂದ್ರಪ್ಪ, ಇ.ಬಿ. ಜಗದೀಶ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.