ADVERTISEMENT

`ಕ್ರಮ ಕೈಗೊಂಡರೆ ಸರ್ಕಾರ ಪತನ'

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 20:01 IST
Last Updated 16 ಡಿಸೆಂಬರ್ 2012, 20:01 IST

ತುಮಕೂರು: ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಮುಂದಾದರೆ ಅಥವಾ ಯಡಿಯೂರಪ್ಪ ಬಣದ ಸಚಿವರ ಸ್ಥಾನ ಬದಲಾದರೆ ಸರ್ಕಾರ ಬೀಳುವುದು ಖಚಿತ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ರಾಜ್ಯದಲ್ಲಿ ಈಗ ಇರುವುದು ಕೆಜೆಪಿ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ. ಇದನ್ನು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಮತ್ತು ಸದಾನಂದಗೌಡ ತಿಳಿಯಬೇಕು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಛೇಡಿಸಿದರು.

ಮುಖ್ಯಮಂತ್ರಿ ಈ ಬಾರಿಯ ಬಜೆಟ್ ಮಂಡಿಸಬೇಕಾಗಿರುವುದರಿಂದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ನನಗೆ ಇದುವರೆಗೂ ಪಕ್ಷದಿಂದ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ನಂತರ ಉತ್ತರ ನೀಡುತ್ತೇನೆ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆನೆ ದಾಳಿಯಿಂದ ವೃದ್ಧನಿಗೆ ಗಾಯ
ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ಆನೆ ದಾಳಿಯಿಂದ ವ್ಯಕ್ತಿಯೊಬ್ಬ ಗಾಯಗೊಂಡು ಅರೆ ಪ್ರಜ್ಞಾವಸ್ಥೆಯಲ್ಲಿ ಶನಿವಾರ ರಾತ್ರಿಯಿಡೀ ಅರಣ್ಯದಲ್ಲಿ ಕಳೆದ ಘಟನೆ ತಾಲ್ಲೂಕಿನ ಕೊಡಂಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾರತ ಮಿಲ್ ಸಮೀಪ ನಡೆದಿದೆ.

ಎತ್ತು ಹುಡುಕಲು ಶನಿವಾರ ಸಂಜೆ ಅರಣ್ಯಕ್ಕೆ ಹೋಗಿದ್ದ ಬಸವರಾಜ ನಾಗಪ್ಪ ಮಕರೊಳ್ಳಿ (65) ಎಂಬುವವರ ಮೇಲೆ ಆನೆ ದಾಳಿ ನಡೆಸಿದೆ.  ಆನೆಯ ಸೊಂಡಿಲಿನ ಹೊಡೆತದಿಂದ ಬಸವರಾಜ ಅವರ ಎದೆ ಮತ್ತು ಕೈಕಾಲುಗಳಿಗೆ ಗಾಯಗಳಾಗಿವೆ.

ಭಾನುವಾರ ಬೆಳಗಿನ ಜಾವ ದನ ಮೇಯಿಸಲು ಹೋದ ವ್ಯಕ್ತಿಯೊಬ್ಬ ನೆಲದಲ್ಲಿ ಬಿದ್ದಿದ್ದ ಬಸವರಾಜ ಅವರನ್ನು ಕಂಡು  ಕಾತೂರ ಅರಣ್ಯ ಇಲಾಖೆಗೆ ಕಚೇರಿಗೆ ವಿಷಯ ತಿಳಿಸಿದ್ದಾನೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ಸಾಗಿಸಿದ್ದಾರೆ.

ತೋಟಗಾರಿಕೆ ವಿಜ್ಞಾನ ವಿ.ವಿ ಘಟಿಕೋತ್ಸವ 21ಕ್ಕೆ
ಬಾಗಲಕೋಟೆ: ತೋಟಗಾರಿಕೆ ವಿಜ್ಞಾನ  ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವ ಇದೇ 21 ರಂದು ಬೆಳಿಗ್ಗೆ 11 ಗಂಟೆಗೆ ನವನಗರದ ಕಲಾಭವನದಲ್ಲಿ ನಡೆಯಲಿದೆ.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸುವರು. ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಭಾರತೀಯ ಕೃಷಿ ಅನುಸಂದಾನ ಪರಿಷತ್ತಿನ ಮಹಾ ನಿರ್ದೇಶಕ ಡಾ. ಎಸ್. ಅಯ್ಯಪ್ಪನ್ ಘಟಿಕೋತ್ಸವದ ಭಾಷಣ ಮಾಡುವರು. ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ  ಹಾಜರಿರುವರು ಎಂದು ವಿಶ್ವವಿದ್ಯಾಲಯದ ಕಲಪತಿ ಎಸ್.ಬಿ.ದಂಡಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲೆಗೆ ಬಿದ್ದು ಇಬ್ಬರು ಬಾಲಕರ ಸಾವು
ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಕುನ್ನಾಳ ಸಮೀಪದ ಘಟಪ್ರಭಾ ಬಲದಂಡೆ ಕಾಲುವೆಗೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಕುನ್ನಾಳ ಗ್ರಾಮದ ಅಲ್ಲಪ್ಪ ರಾಮಪ್ಪ ರಬಕವಿ (10) ಮತ್ತು ವಿಠ್ಠಲ ಹನುಮಂತಪ್ಪ ತಿಪ್ಪಿ (16) ಮೃತಪಟ್ಟಿದ್ದಾರೆ. ಇವರ ಶವಗಳು ಪತ್ತೆಯಾಗಿದ್ದು, ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ರಜೆ ಕಳೆಯಲು ಹೊಲಕ್ಕೆ ಹೋಗಿದ್ದರು.
ಬಾಯಾರಿಕೆಯಾದಾಗ ಪಕ್ಕದ ಘಟಪ್ರಭಾ ಬಲದಂಡೆ ಕಾಲುವೆ ಬಳಿ ಹೋದಾಗ ಒಬ್ಬ ಕಾಲು ಜಾರಿ ನೀರಿಗೆ ಬಿದ್ದನು. ಅವನನ್ನು ರಕ್ಷಿಸಲು ಮತ್ತೊಬ್ಬ ಹೋಗಿ ಅವನೂ ನೀರು ಪಾಲಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT