ADVERTISEMENT

ಕ್ರೀಡಾ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧ

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST
ಕ್ರೀಡಾ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧ
ಕ್ರೀಡಾ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧ   

ರಾಮನಗರ: ಜಿಲ್ಲೆಯಲ್ಲಿ ಕ್ರೀಡಾಭಿವೃದ್ಧಿ ಮತ್ತು ವ್ಯಕ್ತಿಗತ ಅಭಿವೃದ್ಧಿಗೆ ಪೂರಕವಾಗುವಂತಹ ವಾತಾವರಣ ನಿರ್ಮಿಸಲು ಹಾಗೂ ಅದಕ್ಕೆ ಅಗತ್ಯ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದರು.

`ಡೆಕ್ಕನ್ ಅಥ್ಲೆಟಿಕ್ ಕ್ಲಬ್~ ಆಶ್ರಯದ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ಮಟ್ಟದ ವಾರ್ಷಿಕ ರಸ್ತೆ ಓಟದ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಕ್ರೀಡಾ ಕೌಶಲವನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಉದ್ದೇಶದಿಂದ ಇತ್ತೀಚೆಗೆ ಯುವಜನ ಮತ್ತು ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕ್ರೀಡಾ ಬೆಳವಣಿಗೆಗೆ ಏನೇನು ಅಗತ್ಯ ಇದೆ, ಮೂಲ ಸೌಕರ್ಯ ಕೊರತೆ ನೀಗಿಸಲು ಯಾವ ಕೆಲಸಗಳನ್ನು ಕೈಗೊಳ್ಳಬೇಕಿದೆ ಎಂಬ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಹೇಳಿದರು.

ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಲು ಸರ್ಕಾರ ಆಸಕ್ತಿ ಹೊಂದಿದೆ. ಜಿಲ್ಲಾಡಳಿತ ಕಳುಹಿಸುವ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಸರ್ಕಾರ ತಿಳಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ, ಮೂಲ ಸೌಕರ್ಯ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

`ನೆಟ್ಟಕಲ್ಲಪ್ಪ ಅವರು ಕ್ರೀಡಾ ಪೋಷಕರು~

`ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ಸಂಸ್ಥಾಪಕ ವರ್ಗದವರಾದ ಕೆ.ಎ.ನೆಟ್ಟಕಲ್ಲಪ್ಪ ಅವರು ಪತ್ರಿಕೋದ್ಯಮಿಯಷ್ಟೇ ಆಗಿರದೆ, ಕ್ರೀಡಾ ಪೋಷಕರು ಮತ್ತು ಪ್ರೋತ್ಸಾಹಿಯೂ ಆಗಿದ್ದರು. ಕ್ರೀಡಾ ಚಟುವಟಿಕೆಗಳಿಗೆ ಅವರು ಅಪಾರಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದ್ದರು. `

ಡೆಕ್ಕನ್ ಅಥ್ಲೆಟಿಕ್ ಕ್ಲಬ್~ ಸ್ಥಾಪಿಸಿದ ಅವರು ಆ ಮೂಲಕ ರಾಜ್ಯದ ಗ್ರಾಮೀಣ ಮತ್ತು ನಗರ-ಪಟ್ಟಣಗಳ ಮಕ್ಕಳು, ಯುವ ಜನತೆಯಲ್ಲಿ ಅಡಗಿರುವ  ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಿದ್ದಾರೆ. ಅವರ ನಂತರ ಅವರ ಸ್ಮರಣಾರ್ಥ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪ್ರಾಯೋಜಕತ್ವದಲ್ಲಿ  `ಡೆಕ್ಕನ್ ಅಥ್ಲೆಟಿಕ್ ಕ್ಲಬ್~ ನಿರಂತರವಾಗಿ ರಸ್ತೆ ಓಟ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯರು ತೋರಿದ ಗುರಿ ಮತ್ತು ಹಿತ ನುಡಿಗಳನ್ನು `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳು ಅಳವಡಿಸಿಕೊಂಡು ರಾಜ್ಯದಲ್ಲಿ ಕ್ರೀಡಾ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. ಈಗಲೂ ಅದನ್ನು ಮುಂದುವರೆಸಿಕೊಂಡು ಸಾಗುತ್ತಿರುವುದು ಅಭಿನಂದನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಎಲ್ಲ ಹಂತ ಮತ್ತು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾತ್ಮಕ ಮನೋಭಾವವನ್ನು ಜನತೆ ರೂಢಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ರಾಮನಗರದಲ್ಲಿ ನಡೆದ ರಸ್ತೆ ಓಟ ಸ್ಪರ್ಧೆಗಳಲ್ಲಿ ವಿವಿಧ ಜಿಲ್ಲೆಗಳಿಂದ ಬಂದು ಭಾಗವಹಿಸಿದ ಮತ್ತು ವಿಜೇತರಾದ ಎಲ್ಲ ಅಥ್ಲೀಟ್‌ಗಳಿಗೂ ಅವರು ಧನ್ಯವಾದಗಳನ್ನು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ಡಿಎಸ್‌ಪಿ ಎಂ.ಜಿ.ರಾಮಕೃಷ್ಣಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮುರಳೀಧರ್ ಅವರು ವಿವಿಧ ವಿಭಾಗಳ ರಸ್ತೆ ಓಟ ಸ್ಪರ್ಧೆಗಳಲ್ಲಿ ವಿಜೇತರಾದ ಅಥ್ಲೀಟ್‌ಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು.  `ಡೆಕ್ಕನ್ ಅಥ್ಲೆಟಿಕ್ ಕ್ಲಬ್~ನ ಸಂಘಟನಾ ಕಾರ್ಯದರ್ಶಿ ಅನಂತರಾಜು ಉಪಸ್ಥಿತರಿದ್ದರು. ಕ್ಲಬ್‌ನ ಕಾರ್ಯದರ್ಶಿ ಕೆ.ಎನ್.ಚಂದ್ರಶೇಖರ್ ನಿರೂಪಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.