ADVERTISEMENT

ಗಡಿ ಗ್ರಾಮದ ಕಾಲೇಜು ಸಚಿವರ ಜಿಲ್ಲೆಗೆ !

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ರಾಮನಗರ: ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಕನಕಪುರ ತಾಲ್ಲೂಕಿನ ಗಡಿ ಗ್ರಾಮವಾದ ಬಿಜ್ಜಹಳ್ಳಿಯಲ್ಲಿ ನಡೆಯುತ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಹ್ದ್ದುದೆ ಸಹಿತ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ ! ಇದರಿಂದ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗ್ರಾಮದ ಜನತೆ ಕಂಗಾಲಾಗಿದ್ದಾರೆ.

ಅದೂ ಈ ಕಾಲೇಜನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿಗೆ ಸ್ಥಳಾಂತರಿಸಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ (ಪದವಿ ಪೂರ್ವ) ಎಸ್.ಎಚ್.ಕುರಿಯವರ್ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ !

ಗ್ರಾಮೀಣ ಹಾಗೂ ಗಡಿ ಭಾಗದ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ವ್ಯಾಸಂಗ ಮೊಟಕುಗೊಳಿಸದೆ, ಹೆಚ್ಚಿನ ಶಿಕ್ಷಣ ಪಡೆಯಲಿ ಎಂಬ ಸದುದ್ದೇಶದಿಂದ ಮೂರು ವರ್ಷದ ಹಿಂದೆ ಸರ್ಕಾರ ಕನಕಪುರದ ಕೋಡಿಹಳ್ಳಿ ಹೋಬಳಿಯ ಬಿಜ್ಜಹಳ್ಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಿತ್ತು.
 
ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣವೊಡ್ಡಿ ಶಿಕ್ಷಣ ಸಚಿವರು ಈ ಕಾಲೇಜನ್ನು ತನ್ನ ತವರೂರಿಗೆ ಕೊಂಡೊಯ್ದಿದ್ದಾರೆ ಎಂಬ ಆರೋಪ ಗ್ರಾಮದ ಜನತೆಯದ್ದಾಗಿದೆ.

ಹೊಸ ಸರ್ಕಾರಿ ಪಿ.ಯು ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡದ ಶಿಕ್ಷಣ ಇಲಾಖೆಯು ಚುನಾಯಿತ ಪ್ರತಿನಿಧಿಗಳು ಬೇಡಿಕೆಯೊಡ್ಡುವ ಕಡೆ ಕಾಲೇಜುಗಳನ್ನು ಒದಗಿಸಿಕೊಡಲು ಈ ರೀತಿಯ ತಂತ್ರ ಅನುಸರಿಸುತ್ತಿದೆ.

ಕನಿಷ್ಠ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಕನಕಪುರದ ಬಿಜ್ಜಹಳ್ಳಿ ಕಾಲೇಜು ಬಲಿಪಶುವಾಗಿದೆ.

ಗಡಿ ಗ್ರಾಮದ ಸಂಕಟ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಗಡಿ ಗ್ರಾಮಗಳಲ್ಲಿ ಬಿಜ್ಜಹಳ್ಳಿ ಕೂಡ ಒಂದು. ಕನಕಪುರದಿಂದ 28 ಕಿ.ಮೀ ದೂರ ಇರುವ ಬಿಜ್ಜಹಳ್ಳಿಯಿಂದ ಮೂರು- ನಾಲ್ಕು ಕಿ.ಮೀ ಸಮೀಪದಲ್ಲಿಯೇ ತಮಿಳುನಾಡು ಭೂಪ್ರದೇಶ ಇದೆ.
 
ಮೂರು ವರ್ಷದಿಂದ ಗ್ರಾಮದ ಸಮುದಾಯ ಭವನದಲ್ಲಿ ಪಿ.ಯು ಕಾಲೇಜು ನಡೆದುಕೊಂಡು ಹೋಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೇ ಹೆಚ್ಚಿರುವ ಈ ಪ್ರದೇಶದಲ್ಲಿ ಈ ಸಮುದಾಯದ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಾಲೇಜು ವರವಾಗಿದೆ.

ಹಾಗಾಗಿ ಗಡಿ ಪ್ರದೇಶದ ಹಲವು ವಿದ್ಯಾರ್ಥಿಗಳು ಇಲ್ಲಿಯೇ ಪಿ.ಯು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ ಕಾಲೇಜಿಗೆ ಉತ್ತಮ ಫಲಿತಾಂಶವೂ ಬಂದಿದೆ. ಈ ವರ್ಷ 18 ವಿದ್ಯಾರ್ಥಿಗಳು (ಪ್ರಥಮ 9, ದ್ವಿತೀಯ 9) ವ್ಯಾಸಂಗ ನಡೆಸುತ್ತಿದ್ದಾರೆ.

ಈಗ ಕಾಲೇಜನ್ನು ಮುಚ್ಚಿದರೆ ಈ ವಿದ್ಯಾರ್ಥಿಗಳ ವ್ಯಾಸಂಗ ಅರ್ಧಕ್ಕೆ ಮೊಟಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಧರೇಶ್ `ಪ್ರಜಾವಾಣಿ~ ಬಳಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇನ್ನೂ ಎರಡು ವರ್ಷ ಸಮಯ ನೀಡಿದರೆ ಕಾಲೇಜಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಲು ಶಕ್ತಿ ಮೀರಿ ಗ್ರಾಮ ಜನತೆಯೆಲ್ಲ ಪ್ರಯತ್ನಿಸುತ್ತೇವೆ. ಗಡಿಭಾಗದಲ್ಲಿನ ಶೋಷಿತ ಸಮುದಾಯದ ಜನತೆಯ ಮಕ್ಕಳ ವ್ಯಾಸಂಗಕ್ಕಾಗಿ ದೊರೆತಿರುವ ಕಾಲೇಜನ್ನು ಕಸಿದುಕೊಳ್ಳದಿರಲು ಅವರು ಶಿಕ್ಷಣ ಸಚಿವರನ್ನು ಕೋರುತ್ತಾರೆ.

ಅವೈಜ್ಞಾನಿಕ ನಿರ್ಧಾರ: ಈಗಾಗಲೇ ಪ್ರಥಮ ಮತ್ತು ದ್ವಿತೀಯ ಪಿ.ಯು ಪ್ರವೇಶ ಪಡೆದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಂತೂ ಕಾಲೇಜು ಮುಚ್ಚುವ ಸರ್ಕಾರದ ನಿರ್ಧಾರ ಬರಸಿಡಿಲಿನಂತೆ ಬಂದೆರಗಿದೆ.

ಕಾರಣ ಕನಕಪುರ ತಾಲ್ಲೂಕಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ (ಎಚ್‌ಇಪಿಎಸ್) ಸಂಯೋಜನೆಯ ಕೋರ್ಸ್‌ಗಳನ್ನು ಹೊಂದಿರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಬಿಜ್ಜಹಳ್ಳಿ ಗ್ರಾಮದ ಕಾಲೇಜು ಕೂಡ ಒಂದು.

ಬಿಜ್ಜಹಳ್ಳಿಯಿಂದ 10 ಕಿ.ಮೀ ದೂರದಲ್ಲಿರುವ ಕೊಡಿಹಳ್ಳಿ ಕಾಲೇಜು ಹಾಗೂ 28 ಕಿ.ಮೀ ದೂರ ಇರುವ ಕನಕಪುರ ತಾಲ್ಲೂಕಿನ ಸರ್ಕಾರಿ ಪಿ.ಯು ಕಾಲೇಜುಗಳಲ್ಲೆಲ್ಲೂ ಈ ಸಂಯೋಜನೆಯ ಕೋರ್ಸ್‌ಗಳಿಲ್ಲ. ಈ ಭಾಗದ ಬಹುತೇಕ ಕಾಲೇಜುಗಳಲ್ಲಿ ಇರುವುದು ಎಚ್‌ಇಜಿಎಸ್, ಎಚ್‌ಇಪಿಕೆ, ಎಚ್‌ಇಎಸ್‌ಕೆ ಸಂಯೋಜನೆಯ ಕೋರ್ಸ್‌ಗಳು.

`ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯವಾಗಿರುವ ಸಂದರ್ಭದಲ್ಲಿ ಸರ್ಕಾರ ಕಾಲೇಜನ್ನು ದೂರದ ಬೇರಾವುದೋ ಜಿಲ್ಲೆಗೆ ಸ್ಥಳಾಂತರಿಸಿದರೆ ನಾವ್ಲ್ಲೆಲಿ ವ್ಯಾಸಂಗ ಮಾಡುವುದು~ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ನಮ್ಮ ಕಾಲೇಜಿನಲ್ಲಿರುವ ಸಂಯೋಜನೆ ಹೊಂದಿದ ಕೋರ್ಸ್‌ಗಳು ಹತ್ತಿರದ ಯಾವ ಕಾಲೇಜಲ್ಲೂ ಇಲ್ಲದ ಕಾರಣ, ಈ ಕೋರ್ಸ್‌ಗಳಿಗೆ ನಾವು ಬೆಂಗಳೂರು, ರಾಮನಗರ ಅಥವಾ ಚನ್ನಪಟ್ಟಣಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಹೊಸದಾಗಿ ಪ್ರವೇಶ ಪಡೆದು, ನಿತ್ಯ ಸಾರಿಗೆ ವೆಚ್ಚ ಭರಿಸುತ್ತಾ ವ್ಯಾಸಂಗ ಮಾಡುವ ಶಕ್ತಿ ನಮ್ಮೆಲ್ಲಿಲ್ಲ. ಹಾಗಾಗಿ ಈ ಕಾಲೇಜು ನಮ್ಮೂರನ್ನು ಬಿಟ್ಟು ಹೋಯಿತು ಎಂದರೆ, ನಮ್ಮ ಮುಂದಿನ ವ್ಯಾಸಂಗಕ್ಕೆ ಕತ್ತರಿ ಬಿತ್ತು ಎಂದೇ ಅರ್ಥ~ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ಉಪನ್ಯಾಸಕರ ಅಸಮಾಧಾನ: ಇನ್ನೂ ಎರಡು ಮೂರು ವರ್ಷಗಳಲ್ಲಿ  ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತದೆ. ಆದರೆ ಸರ್ಕಾರ ಈಗ ಏಕಾಏಕಿ ಕಾಲೇಜು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿದೆ. ಅದೂ ಶೈಕ್ಷಣಿಕ ವರ್ಷ ಅರ್ಧ ಮುಗಿದಿರುವ ಸಂದರ್ಭದಲ್ಲಿ ಈ ಆದೇಶ ಹೊರಬಿದ್ದಿರುವುದು ವಿದ್ಯಾರ್ಥಿಗಳು ಮತ್ತು ನಮ್ಮನ್ನು ಆತಂಕಕ್ಕೆ ತಳ್ಳಿದೆ ಎಂದು ಉಪನ್ಯಾಸಕರು ಬೇಸರ ವ್ಯಕ್ತಪಡಿಸುತ್ತಾರೆ.

`ಕಾಲೇಜಿನ ಉಪನ್ಯಾಸಕರು ಕನಕಪುರ, ಕೋಡಿಹಳ್ಳಿ ಮತ್ತು ಬಿಜ್ಜಹಳ್ಳಿಯಲ್ಲಿ ಮನೆಯನ್ನು ಬೋಗ್ಯಕ್ಕೆ ಹಾಕಿಸಿಕೊಂಡಿದ್ದೇವೆ. ಈಗ ಮಧ್ಯಂತರ ಅವಧಿಯಲ್ಲಿ ಮನೆ ಮಾಲೀಕರು ನಮ್ಮ ಹಣವನ್ನೂ ವಾಪಸು ಮಾಡುವುದಿಲ್ಲ.

ನಾವು ಸಿದ್ದಾಪುರದ ಹೆಗ್ಗರಣಿಗೆ ಹೋಗಿ ಮನೆ ಮಾಡಿ, ನಮ್ಮ ಮಕ್ಕಳಿಗೆ ಹೊಸ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿಕೊಡುವುದು ಕಷ್ಟವಾಗುತ್ತದೆ~ ಎನ್ನುತ್ತಾರೆ ಉಪನ್ಯಾಸಕರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 5 ಇದ್ದರೂ ಮುಂದುವರೆಯಲು ಅವಕಾಶ ನೀಡುವ ಸರ್ಕಾರ ಗಡಿಭಾಗದ ಪಿ.ಯು ಕಾಲೇಜಿನಲ್ಲಿ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ಮುಚ್ಚಲು ನಿರ್ಧಾರ ತೆಗೆದುಕೊಳ್ಳುವುದು ನ್ಯಾಯ ಸಮ್ಮತವಲ್ಲ.

ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿನಾಡು ಪ್ರದೇಶಗಳ ಹೋರಾಟ ಸಮಿತಿಯ ಅಧ್ಯಕ್ಷರಿಗೆ ದೂರು ನೀಡಲಾಗುವುದು ಎಂದು ಬಿಜ್ಜಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಧರೇಶ್ ಹೇಳುತ್ತಾರೆ.
ಶಿಕ್ಷಣ ಸಚಿವರಿಗೆ ಡಿಕೆಶಿ ಪತ್ರ

`ನನ್ನ ಮತ ಕ್ಷೇತ್ರ ಡಾ. ನಂಜುಂಡಪ್ಪ ವರದಿ ಮೇರೆಗೆ ಅತಿ ಹಿಂದುಳಿದ ಪ್ರದೇಶ ಆಗಿರುವುದರಿಂದ ಗ್ರಾಮೀಣ ಪ್ರದೇಶದ ಶಿಕ್ಷಣದ ದೃಷ್ಟಿಯಿಂದ ಬೇರೆ ಕಡೆಗೆ ಸ್ಥಳಾಂತರ ಮಾಡದೆ ಬಿಜ್ಜಹಳ್ಳಿಯಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮುಂದುವರೆಸುವಂತೆ~ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ.

`ಒಂದು ವೇಳೆ ಸದರಿ ಗ್ರಾಮದಲ್ಲಿ ಕಾಲೇಜು ಮುಂದುವರೆಸಲು ಸಾಧ್ಯವಾಗದಿದ್ದರೆ, ಈಗಾಗಲೇ ಅನೇಕ ಬಾರಿ ನಾನು ಕೊರಿರುವಂತೆ ಕನಕಪುರದ ಚಿಕ್ಕಮುದುವಾಡಿ ಗ್ರಾಮಕ್ಕೆ ಬದಲಾಯಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡುವಂತೆ~ ಅವರು ಕೋರಿದ್ದಾರೆ.

ಮುಖ್ಯಾಂಶಗಳು
ಕನಕಪುರದ ಗಡಿಗ್ರಾಮ ಬಿಜ್ಜಹಳ್ಳಿಯ ಸರ್ಕಾರಿ ಪಿ.ಯು ಕಾಲೇಜು ಎತ್ತಂಗಡಿ !

ಶಿಕ್ಷಣ ಸಚಿವ ಕಾಗೇರಿ ಅವರ ಜಿಲ್ಲೆಗೆ ಹುದ್ದೆ ಸಹಿತ ಸ್ಥಳಾಂತರಕ್ಕೆ ಆದೇಶ

ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗ್ರಾಮಸ್ಥರಲ್ಲಿ ತಳಮಳ

ಸರ್ಕಾರದ ಅವೈಜ್ಞಾನಿಕ ನಿರ್ಧಾರಕ್ಕೆ ವಿದ್ಯಾರ್ಥಿಗಳ ಶಾಪ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.