ADVERTISEMENT

ಗಣಪತಿ ವಿಸರ್ಜನೆ; ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಹಾಸನ: ಗಣಪತಿ ಸೇವಾ ಸಂಸ್ಥೆ ಇಲ್ಲಿನ ಗಣೇಶ ಪೆಂಡಾಲ್‌ನಲ್ಲಿ ಸ್ಥಾಪಿಸಿದ್ದ ಗೌರಿ- ಗಣೇಶ ಮೂರ್ತಿಗಳನ್ನು ಶನಿವಾರ ಸಂಜೆ ನಗರದ ದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸೆ. 19ರಂದು ಪ್ರತಿಷ್ಠಾಪನೆಗೊಂಡು 25 ದಿನಗಳಿಂದ ಪೂಜಿಸಿದ್ದ ಗಣೇಶ ಮೂರ್ತಿಗೆ ಶನಿವಾರ ಮುಂಜಾನೆ ವಿಶೇಷ ಪೂಜೆ ಸಲ್ಲಿಸಿ, ಹೋಮ ಹವನಗಳನ್ನು ನಡೆಸಲಾಯಿತು. ಬಳಿಕ ಬೆಳಿಗ್ಗೆ 9.30ಕ್ಕೆ ಮೂರ್ತಿಯನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಇಡಲಾಯಿತು.

ಅಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಶಾಸಕ ಎಚ್.ಎಸ್.ಪ್ರಕಾಶ್, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್, ಗಣಪತಿ ಸೇವಾ ಸಂಸ್ಥೆ ಕಾರ್ಯದರ್ಶಿ ಚನ್ನವೀರಪ್ಪ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು. ಇದಾಗುತ್ತಿದ್ದಂತೆಯೇ ಭಕ್ತರು ರಸ್ತೆಯಲ್ಲೇ ಕರ್ಪೂರ ಬೆಳಗಿ, ತೆಂಗಿನಕಾಯಿಗಳನ್ನು ಒಡೆದು ಹರಕೆ ತೀರಿಸಿದರು.

ಬಳಿಕ ಹತ್ತಾರು ಕಲಾತಂಡಗಳೊಂದಿಗೆ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬೆಳಿಗ್ಗೆ ಆರಂಭವಾದ ಮೆರವಣಿಗೆ ರಾತ್ರಿಯವರೆಗೂ ನಡೆಯಿತು. ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಸೋಮನ ಕುಣಿತ, ನಂದಿಧ್ವಜ ಕುಣಿತ, ಗೊಂಬೆ ಕುಣಿತ, ಕಂಸಾಳೆ, ವೀರಗಾಸೆ, ಕೀಲು ಕುದುರೆ, ಮಂಗಳವಾದ್ಯ, ರೋಡ್ ಆರ್ಕೇಸ್ಟ್ರ, ಮುಂತಾದ ಕಲಾತಂಡಗಳ ಪ್ರದರ್ಶನ ನೊಡುಗರ ಮನಸೂರೆ ಗೊಂಡವು.

ADVERTISEMENT

ಮೆರವಣೆಗೆ ಸಾಗುವ ಮಾರ್ಗದಲ್ಲಿ ಭಕ್ತರು ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.
ರಾತ್ರಿ ದೇವಿ ಕೆರೆ ಸಮೀಪ ಮೆರವಣಿಗೆ ಅಂತ್ಯಗೊಳಿಸಲಾಯಿತು. ಅಲ್ಲಿ ತೆಪ್ಪೋತ್ಸವ ಮಾಡಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಆ ಮೂಲಕ 58ನೇ ವರ್ಷದ ಗಣೇಶೊತ್ಸವಕ್ಕೆ ಮಂಗಳ ಹಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.