ಮದ್ದೂರು: ತಾಲ್ಲೂಕಿನ ಆಬಲವಾಡಿಯಲ್ಲಿ ಶುಕ್ರವಾರ `ಗ್ರಾಮೀಣ ಕ್ರೀಡೋತ್ಸವ~ವು ಸಂಭ್ರಮ, ಸಡಗರಗಳಿಂದ ನಡೆಯಿತು.
ಯುವಜನ ಸೇವಾ ಕ್ರೀಡಾ ಇಲಾಖೆ, ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಕ್ರೀಡಾ ಸಂಘ ಹಾಗೂ ರಾಹುಲ್ ದ್ರಾವಿಡ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ಗ್ರಾಮೀಣ ಕ್ರೀಡೋತ್ಸವದಲ್ಲಿ ಯುವತಿಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಮೂರುಕಾಲಿನ ಓಟ ಏರ್ಪಡಿಸಲಾಗಿತ್ತು. ಪುರುಷರಿಗೆ ಮುದ್ದೆ ತಿನ್ನುವ ಸ್ಪರ್ಧೆ, ಗೋಣಿಚೀಲ ಓಟ, ಬಾಲಕ-ಬಾಲಕಿಯರಿಗೆ ಕಪ್ಪೆ ಓಟ ಹಾಗೂ ಸ್ಲೋ ಸೈಕಲ್ ರೇಸ್ ಸ್ಪರ್ಧೆಗಳು ನಡೆದವು.
ಇದೇ ಮೊದಲ ಬಾರಿಗೆ ತಮ್ಮ ಗ್ರಾಮದಲ್ಲಿ ನಡೆದ ವಿಶೇಷ ಗ್ರಾಮೀಣ ಆಟಗಳನ್ನು ಕಂಡು ಜನರು ಸಂತಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಿವಮಾಧು ಕ್ರೀಡೋತ್ಸವ ಉದ್ಘಾಟಿಸಿದರು. ವಿವೇಕಾನಂದ ಸಂಘದ ಅಧ್ಯಕ್ಷ ಲಾರಾ ಪ್ರಸನ್ನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉರಗ ಮಿತ್ರ ಮ.ನ.ಪ್ರಸನ್ನಕುಮಾರ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ರಾಹುಲ್ ದ್ರಾವಿಡ್ ಅಭಿಮಾನಿಗಳ ಬಳಗದ ಅಧ್ಯಕ್ಷ ಅನಿಲ್, ಕಾರ್ಯದರ್ಶಿ ಲೋಕೇಶ್, ಸದಸ್ಯರಾದ ಮುರುಗೇಶ್, ಸಂಜಯ್, ಭಾಸ್ಕರ್, ತಿಮ್ಮಯ್ಯ, ಸಂತೋಷ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.