ADVERTISEMENT

ಗ್ರಾಹಕ ಹಕ್ಕು ಚಲಾವಣೆಗೆ ರಸೀದಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

 ಹುಬ್ಬಳ್ಳಿ: ಗ್ರಾಹಕರು ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ತಾವು ಖರೀದಿಸುವ ವಸ್ತುಗಳಿಗೆ ತಪ್ಪದೇ ರಸೀದಿ ಪಡೆಯಬೇಕು. ಆಗ ಮಾತ್ರ ಹಕ್ಕು ಚಲಾಯಿಸಲು ಸಾಧ್ಯ ಎಂದು ಜಿಲ್ಲಾ ಗ್ರಾಹಕರ ದೂರುಗಳ ಪರಿಹಾರ ವೇದಿಕೆ ಅಧ್ಯಕ್ಷ ಬಿ.ಎಚ್. ಹರ್ಷ ಸಲಹೆ ನೀಡಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಗ್ರಾಹಕ ಸಂಘಟನೆಗಳ ಆಶ್ರಯದಲ್ಲಿ ನಗರದ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇವತ್ತು ಉತ್ಪನ್ನದ ಕುರಿತು ಗ್ರಾಹಕನನ್ನು ಮರುಳಾಗಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆಂದೇ ಜಾಹೀರಾತುಗಳಿಗೆ ಕೋಟಿಗಟ್ಟಲೆ ಹಣ ವಿನಿಯೋಗವಾಗುತ್ತಿದೆ. ಈ ಕುರಿತು ಜನರು ಎಚ್ಚರ ವಹಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ 1986ರಲ್ಲಿ ಕಾಯ್ದೆ ಜಾರಿಗೆ ಬಂದಿದೆ. ಅದರಂತೆ ಗ್ರಾಹಕ ಕೇವಲ ಒಂದು ಅರ್ಜಿ ಸಲ್ಲಿಕೆ ಮೂಲಕ ನ್ಯಾಯ ಪಡೆಯಬಹುದಾಗಿದೆ.

ಪ್ರತಿ ಶಾಲೆ-ಕಾಲೇಜಿನಲ್ಲೂ ಗ್ರಾಹಕ ವೇದಿಕೆಗಳು ಸ್ಥಾಪನೆಯಾಗಬೇಕು. ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಬೇಕು ಎಂದು ನುಡಿದರು. ವೇದಿಕೆ ಸದಸ್ಯರಾದ ಎಸ್.ಎಲ್. ಮಟ್ಟಿ, ಎಂ.ವಿಜಯಲಕ್ಷ್ಮಿ, ಆಹಾರ ಇಲಾಖೆ ಉಪನಿರ್ದೇಶಕ ಕೆ.ಎಸ್. ಕಲ್ಲನಗೌಡರ, `ಜನಾದೇಶ~ ಸಂಘಟನೆ ಅಧ್ಯಕ್ಷ ಬಸವಪ್ರಭು ಹೊಸಕೇರಿ, ತೂಕ-ಅಳತೆ ಇಲಾಖೆ ಅಧಿಕಾರಿ ದೇವೂರ, ಜಿ.ಕೆ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಬಿ. ಪಾಟೀಲ, ಕಾಡಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ವಿ.ಎಂ. ಕಿಣಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.