ADVERTISEMENT

ಚನ್ನಪಟ್ಟಣ: 3648 ಲಕ್ಷ ರೂ. ಆದಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಚನ್ನಪಟ್ಟಣ: ನಗರಸಭೆಯು 2012-13ನೇ ಸಾಲಿನಲ್ಲಿ ಸುಮಾರು 3648 ಲಕ್ಷ ರೂ. ಆದಾಯ ನಿರೀಕ್ಷೆಯ, 3629 ಲಕ್ಷ ರೂ. ಖರ್ಚಿನ ಬಜೆಟ್ ಮಂಡಿಸಿದೆ.

ಪುರಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ರೇಷ್ಮಾಬಾನು, ಉಪಾಧ್ಯಕ್ಷ ಕೆ.ಎಲ್. ಕುಮಾರ್ ಬಜೆಟ್ ಮಂಡನೆ ಮಾಡಿದರು.

2.8 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ, ವಾಣಿಜ್ಯ ಪರವಾನಗಿ ನೀಡಲು 60 ಲಕ್ಷ ರೂ., ವಿವಿಧ ಬಾಡಿಗೆ ಮೂಲಕ 25 ಲಕ್ಷ ರೂ. ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ.

ನಗರಸಭೆ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ ನಿರ್ಮಾಣಕ್ಕೆ 3 ಲಕ್ಷ ರೂ. ಅನುದಾನ, ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಉದ್ಯಾನವನ ಅಭಿವೃದ್ಧಿ, ಕುಡಿಯುವ ನೀರಿಗೆ 1 ಕೋಟಿ ರೂ., ಚರಂಡಿಗಳ ಕಾಮಗಾರಿಗೆ 1 ಕೋಟಿ ರೂ., ರಸ್ತೆಗಳು ಹಾಗೂ ಫುಟ್‌ಪಾತ್ ಕಾಮಗಾರಿಗೆ 1 ಕೋಟಿ ರೂ., ವಿವಿಧ ದುರಸ್ತಿ ಕಾಮಗಾರಿಗಳಿಗೆ 10 ಲಕ್ಷ ರೂ., ಬೀದಿದೀಪ ನಿರ್ವಹಣೆಗೆ 25 ಲಕ್ಷ ರೂ., ಕಸ ವಿಲೇವಾರಿಗೆ 1.2 ಲಕ್ಷ ರೂ., ಕಟ್ಟಡಗಳ ಹಾಗೂ ಸ್ಥಿರಾಸ್ತಿ ನಿರ್ವಹಣೆಗೆ 15 ಲಕ್ಷ ರೂ. ವಿನಿಯೋಗಿಸಲಾಗುವುದು ಎಂದು ಅಧ್ಯಕ್ಷೆ ರೇಷ್ಮಾಬಾನು ತಿಳಿಸಿದರು.

ಮುಂದಿನ ವರ್ಷದಲ್ಲಿ ಎಸ್‌ಎಫ್‌ಸಿ ಮುಕ್ತನಿಧಿಯ ಅನುದಾನದಿಂದ 4 ಕೋಟಿ, 13ನೇ ಹಣಕಾಸು ಯೋಜನೆ, ಸಿಎಂಎಸ್‌ಎಂಟಿಡಿಪಿ ಯೋಜನೆ ಮತ್ತು ಇತರೆ ಅನುದಾನದಿಂದ 6 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಉಪಾಧ್ಯಕ್ಷ ಕೆ.ಎಲ್.ಕುಮಾರ್ ತಿಳಿಸಿದರು.

ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣಕ್ಕೆ 33 ಕೋಟಿ ರೂ. ಮೀಸಲು, ಪಿಟಿಎಸ್ ಬಳಿ 50 ಲಕ್ಷ ರೂ. ವೆಚ್ಚದಲ್ಲಿ ಸ್ವಾಗತ ಕಮಾನು ನಿರ್ಮಾಣ, ಘನತ್ಯಾಜ್ಯ ವಸ್ತು ವಾರ್ಷಿಕ ವಿಲೇವಾರಿ ವೆಚ್ಚಕ್ಕಾಗಿ 75 ಲಕ್ಷ ರೂ. ನೀಡಲಾಗುವುದು ಎಂದು ಅವರು ತಿಳಿಸಿದರು.

ಹಾಗೆಯೇ 50 ಲಕ್ಷ ರೂ. ವೆಚ್ಚದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಕೆ, 75 ಲಕ್ಷ ರೂ. ವೆಚ್ಚದಲ್ಲಿ ಆಟೊ ಟಿಪ್ಪರ್ ಖರೀದಿ, ಲ್ಯಾಂಡ್‌ಫಿಲ್ ಸೈಟ್‌ಗೆ 2 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ತಿಳಿಸಿದರು. ಸುಫಲ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಈ ಬಗ್ಗೆ ಶೀಘ್ರವೇ ಸಭೆ ಕರೆಯಲು ಅಧ್ಯಕ್ಷೆ ರೇಷ್ಮಾಭಾನು ಆಯುಕ್ತರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.