ಶ್ರೀರಂಗಪಟ್ಟಣ: ತಾಲ್ಲೂಕು ಪಂಚಾಯಿತಿಯು ಭಾರತ್ ನಿರ್ಮಾಣ್ ಸ್ವಯಂ ಸೇವಕರಿಗಾಗಿ ತಾಲ್ಲೂಕಿನ ಚನ್ನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಜಾಗೃತಿ ಶಿಬಿರದಲ್ಲಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಅಮರನಾಥ್, ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ಪಿಡಿಒ ಬಸವರಾಜು ಇತರರು ಬೀದಿಯ ಕಸ ಗುಡಿಸಿದರು.
ಗ್ರಾಮದ ದೇವಾಲಯ ಆವರಣದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆವರೆಗೆ ಬೀದಿಯ ಬದಿಯಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಸಾಗಿಸಿದರು. ಬೀದಿ ಬದಿಯಲ್ಲಿದ್ದ ತಿಪ್ಪೆಗಳನ್ನು ಖುದ್ದು ನಿಂತು ದೂರ ಸರಿಸಿದರು. ಕಸ ಸಾಗಿಸಲು ಗ್ರಾಮಸ್ಥರು ಟ್ರ್ಯಾಕ್ಟರ್ ನೀಡಿ ಸಹಕರಿಸಿದರು. ಕಟ್ಟಿಕೊಂಡಿದ್ದ ಚರಂಡಿಗಳನ್ನು ಸ್ವಚ್ಛ ಮಾಡಲಾಯಿತು. ನಂತರ ಡಿಡಿಟಿ ಸಿಂಪಡಣೆಯೂ ನಡೆಯಿತು.
ಮೊದಲ ಹಂತದಿಂದ 4ನೇ ಹಂತದವರೆಗೆ ತರಬೇತಿ ಪಡೆದ ಸುಮಾರು 60 ಮಂದಿ ಭಾರತ್ ನಿರ್ಮಾಣ್ ಸ್ವಯಂ ಸೇವಕರು ಕೈಯಲ್ಲಿ ಪೊರಕೆ, ಗುದ್ದಲಿ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದರು.
ಕುಕ್ಕೆಗಳಿಗೆ ತುಂಬಿದ ಕಸವನ್ನು ಮುಜುಗರ ಇಲ್ಲದೆ ತಲೆ ಮೇಲೆ ಹೊತ್ತು ಸಾಗಿಸಿದರು. ಗ್ರಾಮದಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲಾಯಿತು.
ಸ್ವಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಮತ್ತು ಭಾರತ್ ನಿರ್ಮಾಣ್ ಸ್ವಯಂ ಸೇವಕರಿಗೆ ಗ್ರಾಮಸ್ಥರು ಮಜ್ಜಿಗೆ, ಪಾನಕ ನೀಡಿ ಸತ್ಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.