ADVERTISEMENT

ಚಿತ್ರದುರ್ಗ: ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:30 IST
Last Updated 15 ಫೆಬ್ರುವರಿ 2011, 18:30 IST

ಚಿತ್ರದುರ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಇಲ್ಲಿ ಗ್ರಾಮ ಪಂಚಾಯ್ತಿ ನೌಕರರಿಂದ ಜಿಲ್ಲಾ ಪಂಚಾಯ್ತಿ ಚಲೋ ಕಾರ್ಯಕ್ರಮ ನಡೆಯಿತು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯ್ತಿ ನೌಕರರಿಗೆ ಸರ್ಕಾರ ನಿಗದಿಪಡಿಸಿದ ವೇತನ ಸಿಗುತ್ತಿಲ್ಲ.ಆದ್ದರಿಂದ ಗ್ರಾಮ ಪಂಚಾಯ್ತಿ ನೌಕರರಿಗೆ ವೇತನ ನೀಡಲು ಪ್ರತ್ಯೇಕ ಶೀರ್ಷಿಕೆ ರಚಿಸಬೇಕು. ಗ್ರಾಮ ಪಂಚಾಯ್ತಿ ನೌಕರರಿಗೆ ಭವಿಷ್ಯನಿಧಿ ಯೋಜನೆ ಜಾರಿ ಮಾಡಲು ಸರ್ಕಾರ ಆದೇಶ ಮಾಡಿ ಎರಡು ವರ್ಷ ಕಳೆದರೂ ಯಾವುದೇ ಗ್ರಾಮ ಪಂಚಾಯ್ತಿಯಲ್ಲಿ ಜಾರಿಯಾಗಿಲ್ಲ. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ದೂರಿದರು.

ಕಾರ್ಯದರ್ಶಿ-2 ಹುದ್ದೆಗೆ ನೇಮಕಾತಿಯಲ್ಲಿ ತಿದ್ದುಪಡಿ ಮಾಡಿ 100ರಷ್ಟು ಮೀಸಲಾತಿ ನೀಡಬೇಕು. ಕಳೆದ 20 ವರ್ಷಗಳಿಂದ ಅನುಸರಿಸಿಕೊಂಡು ಬಂದ ನಿಯಮದಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮೂರನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಅನುದಾನ ಹೆಚ್ಚಿಸಬೇಕು. ಪ್ರತಿ ತಿಂಗಳು ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆ ಸೇರಿ ವೇತನ ನೀಡಬೇಕು.ಎಸ್ಸೆಸ್ಸೆಲ್ಸಿ ಪಾಸಾದ ನೀರಗಂಟಿ ಮತ್ತು ಪಂಪ್ ಆಪರೇಟರ್ ಸಿಪಾಯಿಗಳಿಗೆ ಕರವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಗಣಕಯಂತ್ರ ಸಹಾಯಕರನ್ನು ಗ್ರಾಮ ಪಂಚಾಯ್ತಿ ನೌಕರರೆಂದು ಪರಿಗಣಿಸಬೇಕು ಎಂದು ನೌಕರರು ಈ ಸಂದರ್ಭದಲ್ಲಿ ಆಗ್ರಹಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಮಲಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಹರೀಶ್, ಜಿಲ್ಲಾ ಖಜಾಂಚಿ ಎಂ.ಎಚ್. ರಮೇಶ್, ವೈ. ಕುಮಾರ್ ಮತ್ತಿತರರು ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.