ADVERTISEMENT

ಚಿತ್ರದುರ್ಗ: ವರಮಹಾಲಕ್ಷ್ಮಿ ಹಬ್ಬ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 19:30 IST
Last Updated 12 ಆಗಸ್ಟ್ 2011, 19:30 IST
ಚಿತ್ರದುರ್ಗ: ವರಮಹಾಲಕ್ಷ್ಮಿ ಹಬ್ಬ ಸಂಭ್ರಮ
ಚಿತ್ರದುರ್ಗ: ವರಮಹಾಲಕ್ಷ್ಮಿ ಹಬ್ಬ ಸಂಭ್ರಮ   

ಚಿತ್ರದುರ್ಗ: ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮ, ಸಡಗರಗಳಿಂದ ನಡೆಯಿತು.  ಮಹಿಳೆಯರ ಹಬ್ಬವೆಂದೇ ಖ್ಯಾತಿಯಾದ ವರಮಹಾಲಕ್ಷ್ಮಿ ಹಬ್ಬವನ್ನು ಮನೆ-ಮನೆಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದಂದು ಆಚರಿಸುವ ಪದ್ಧತಿ ಬೆಳೆದು ಬಂದಿದೆ. ಹಬ್ಬದ ನಿಮಿತ್ತ ಸಾಯಂಕಾಲದವರೆಗೂ ಉಪವಾಸವಿದ್ದು, ವ್ರತ ಮಾಡಲಾಗುತ್ತದೆ. ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ.

ನಾನಾ ರೀತಿಯಲ್ಲಿ ವೈವಿಧ್ಯಮಯವಾಗಿ ವರಮಹಾಲಕ್ಷ್ಮಿಯನ್ನು ಅಲಂಕರಿಸಿ ಪೂಜೆ ಮಾಡಲಾಯಿತು. ಪೂಜೆ ಅಂಗವಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗಿತ್ತು.

ಹಬ್ಬದ ಅಂಗವಾಗಿ ಹೊಸ ಬಟ್ಟೆಗಳು, ಚಿನ್ನಾಭರಣ ಧರಿಸಿಕೊಂಡು ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರು, ಆತ್ಮೀಯರು ಪರಸ್ಪರ ಮನೆ ಮನೆಗೆ ತೆರಳಿ ದೇವಿ ಆಶೀರ್ವಾದ ಪಡೆದುಕೊಂಡು ಪ್ರಸಾದ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಬೆಲೆ ಏರಿಕೆ ಬಿಸಿ ತಟ್ಟಿದ್ದರೂ ಹಬ್ಬದ ಸಂಭ್ರಮವನ್ನು ಕುಂದಿಸಲಿಲ್ಲ. ಗುರುವಾರ ಮತ್ತು ಶುಕ್ರವಾರ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು. ಹೂವು-ಹಣ್ಣು, ಬಾಳೆ ದಿಂಡುಗಳ ಬೆಲೆಗಳು ದುಪ್ಪಟ್ಟಾಗಿದ್ದರೂ ಖರೀದಿ ಜೋರಾಗಿ ನಡೆಯಿತು.

ನಗರದ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಲ್ಲೂ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.