ADVERTISEMENT

`ಚಿನ್ನ- ಬೆಳ್ಳಿ ಕೆಲಸಗಾರರಿಗೆ ನೆರವು'

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಶಿವಮೊಗ್ಗ: ಚಿನ್ನ-ಬೆಳ್ಳಿ ಕೆಲಸಗಾರರಿಗೆ ಶೇ 3ರ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲು ಸರ್ಕಾರ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ನಗರದ ಕುವೆಂಪು ರಂಗಮಂದಿರ ಹಿಂಭಾಗದ ಎನ್‌ಇಎಸ್ ಮೈದಾನದಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ ಭಾನುವಾರ  ಹಮ್ಮಿಕೊಂಡಿದ್ದ ದೈವಜ್ಞ ಬ್ರಾಹ್ಮಣರ ರಾಷ್ಟ್ರೀಯ  ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದೊಡ್ಡ ಆಭರಣ ಅಂಗಡಿಗಳಿಂದ ಚಿನ್ನ-ಬೆಳ್ಳಿ ವೃತ್ತಿ ಮಾಡುವವರಿಗೆ ಈಚೆಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸ್ಪರ್ಧೆಗೆ ತಕ್ಕಂತೆ ವೃತ್ತಿಯಲ್ಲಿ ಸಾಧನೆ ಮಾಡಬೇಕಾಗಿದೆ.

ADVERTISEMENT

ಈ ನಿಟ್ಟಿನಲ್ಲಿ ಸರ್ಕಾರ ಚಿನ್ನ-ಬೆಳ್ಳಿ ವೃತ್ತಿ ಮಾಡುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಿದೆ ಎಂದರು.

ಬೆಂಗಳೂರಿನಲ್ಲಿ ಸಮುದಾಯಕ್ಕೆ ಶೀಘ್ರದಲ್ಲೇ ಒಂದು ನಿವೇಶನ ಒದಗಿಸಲಾಗುವುದು ಎಂದ ಅವರು, ದೈವಜ್ಞ ಬ್ರಾಹ್ಮಣರಿಗೆ ನುರಿತ ಚಿನ್ನ-ಬೆಳ್ಳಿ ಕೆಲಸಗಾರರಿಂದ ತರಬೇತಿ ಮತ್ತು ವೃತ್ತಿಪರ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಲು ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆಗೂ ಸರ್ಕಾರ ಮುಂದಾಗಲಿದೆ ಎಂದರು.

ಹಾಗೆಯೇ, ಚಿನ್ನ-ಬೆಳ್ಳಿ ವರ್ತಕರಿಗೆ ಮತ್ತು ಕೆಲಸಗಾರರಿಗೆ ಪೊಲೀಸರಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಇಲಾಖೆಗೆ ಸೂಚನೆ ನೀಡಲಾಗುವುದು. ಆದರೆ, ಇದಕ್ಕೆ ಸಮುದಾಯದಿಂದಲೂ ತಕ್ಕ ಸ್ಪಂದನೆ ಸಿಗಬೇಕು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ದೈವಜ್ಞ ಬ್ರಾಹ್ಮಣರಿಗೆ ನಿವೇಶನ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಜಾಗ ಗುರುತಿಸುವ ಕೆಲಸವನ್ನು ಸಮುದಾಯವೇ ಕೈಗೆತ್ತಿಕೊಳ್ಳಲು ಮುಂದಾಗಬೇಕು ಎಂದರು.

ರೂ. 25ಲಕ್ಷ ಅನುದಾನ:
ಸಂಸತ್ ಸದಸ್ಯ ಅನಂತಕುಮಾರ್ ಮಾತನಾಡಿ, ಸರ್ಕಾರ ಬೆಂಗಳೂರಿನಲ್ಲಿ ನೀಡುವ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ  ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 25ಲಕ್ಷ ನೀಡುವೆ. ಸಂಕ್ರಾಂತಿ ನಂತರ ಕೈಗೊಳ್ಳುವ ಕಟ್ಟಡದ ಭೂಮಿಪೂಜೆಗೆ ಬೇಕಾಗುವ ಸಿದ್ಧತೆ ಕೈಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ನಿಧಿಯಿಂದ ಮುಂದಿನ ವಾರದಲ್ಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮರಾವ್ ವಿ. ರಾಯ್ಕರ್ ವಹಿಸಿದ್ದರು.

ದೈವಜ್ಞ ಬ್ರಾಹ್ಮಣ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.