ADVERTISEMENT

ಜನರ ಸೆಳೆದ ಕೆಂಪಕ್ಕಿ ಸಂತೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 19:59 IST
Last Updated 23 ಫೆಬ್ರುವರಿ 2013, 19:59 IST
ಹುಬ್ಬಳ್ಳಿಯಲ್ಲಿ ಶನಿವಾರ ಕೆಂಪಕ್ಕಿ ಸಂತೆ ಉದ್ಘಾಟಿಸಿದ ದಿಂಗಾಲೇಶ್ವರ ಸ್ವಾಮೀಜಿ ಅಕ್ಕಿ ವೀಕ್ಷಿಸಿದರು. ಕೃಷಿ ಪಂಡಿತ ಚನ್ನಬಸಪ್ಪ ಕೊಂಬಳಿ, ಸಹಜ ಸಮೃದ್ಧಿ ಸಂಘಟನೆ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮತ್ತಿತರರು ಹಾಜರಿದ್ದರು
ಹುಬ್ಬಳ್ಳಿಯಲ್ಲಿ ಶನಿವಾರ ಕೆಂಪಕ್ಕಿ ಸಂತೆ ಉದ್ಘಾಟಿಸಿದ ದಿಂಗಾಲೇಶ್ವರ ಸ್ವಾಮೀಜಿ ಅಕ್ಕಿ ವೀಕ್ಷಿಸಿದರು. ಕೃಷಿ ಪಂಡಿತ ಚನ್ನಬಸಪ್ಪ ಕೊಂಬಳಿ, ಸಹಜ ಸಮೃದ್ಧಿ ಸಂಘಟನೆ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮತ್ತಿತರರು ಹಾಜರಿದ್ದರು   

ಹುಬ್ಬಳ್ಳಿ: ಜೀವಪೋಷಕ ಸತ್ವವನ್ನೊಳಗೊಂಡ ಕೆಂಪಕ್ಕಿ, ವೈದ್ಯಕೀಯ ಗುಣ ಹೊಂದಿರುವ ಕಪ್ಪು ಅಕ್ಕಿ, ಬಂಗಾರದ ಬಣ್ಣದ ರತ್ನಚೂಡ ಅಕ್ಕಿ, ಭರಣಿ ಮಳೆಯ ಬಂಗಾರದ ಗುಂಡು ಅಕ್ಕಿ ಮುಂತಾದವು ಇಲ್ಲಿ ಶನಿವಾರ ಆರಂಭವಾದ  ಕೆಂಪಕ್ಕಿ ಸಂತೆಯಲ್ಲಿ ಸಾರ್ವಜನಿಕರ ಗಮನಸೆಳೆದವು.

ಬೆಂಗಳೂರಿನ ಸಹಜ ಸಮೃದ್ಧ ಸಂಘಟನೆ ಹಾಗೂ ನಗರದ ದೇಶಪಾಂಡೆ ಫೌಂಡೇಶನ್ ಆಶ್ರಯದಲ್ಲಿ ಜೆ.ಸಿ. ನಗರದ ಲಕ್ಷ್ಮಿ ಸದನದಲ್ಲಿ ಆರಂಭಗೊಂಡ ಮೂರು ದಿನಗಳ ಕೆಂಪಕ್ಕಿ ಸಂತೆಯನ್ನು ದಿಂಗಾಲೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಸಂತೆಯಲ್ಲಿ 30ಕ್ಕೂ ಹೆಚ್ಚು ಬಗೆಯ ಕೆಂಪಕ್ಕಿಯ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ವೈದ್ಯಕೀಯ ಗುಣ ಹೊಂದಿರುವ ನವರ, ಕೇರಳ ಮೂಲದ ಡಯಾಬಿಟಿಕ್ ಅಕ್ಕಿ (ಕರುವೈ ಕಲಂಜಿ), ಜೋಳಗ, ಕರಿ ಕಳವೆ, ಬಿಳಿ ನೆಲ್ಲು, ಕರಿ ಜಡ್ಡು ಮುಂತಾದ ಕೆಂಪು ಮತ್ತು ಕಂದು ಮಿಶ್ರಿತ ಕಪ್ಪು ಅಕ್ಕಿ ಪ್ರದರ್ಶನದಲ್ಲಿತ್ತು. 

`ಮನುಷ್ಯ ಪ್ರಕೃತಿ ಸಹಜ ಅನ್ನ ತಿನ್ನುವುದನ್ನು ಬಿಟ್ಟು ವಿಕೃತ ಅನ್ನ ತಿನ್ನುತ್ತಿದ್ದಾನೆ. ಪಕೃತಿಯಲ್ಲಿ ಸಿಕ್ಕಿದ್ದನ್ನು ತಿನ್ನುವ ಪ್ರಾಣಿ, ಪಕ್ಷಿಗಳು ಆರೋಗ್ಯವಾಗಿವೆ. ಆದರೆ ಮನುಷ್ಯರು ಋತುಮಾನಕ್ಕೆ ವಿರುದ್ಧವಾಗಿ ನಡೆದುಕೊಂಡು ಆರೋಗ್ಯ ಕಳೆದುಕೊಂಡಿದ್ದಾರೆ' ಎಂದು ದಿಂಗಾಲೇಶ್ವರ ಸ್ವಾಮೀಜಿ ವಿಷಾದಿಸಿದರು.

`ಹಸಿರು ಕ್ರಾಂತಿಗೂ ಮುಂಚೆ ದೇಶದಲ್ಲಿ ಸಾವಿರಾರು ಬಗೆಯ ಕೆಂಪಕ್ಕಿಗಳಿದ್ದವು. ನೆರೆ, ಬರ, ಉಪ್ಪುನೀರಿನಲ್ಲೂ ಬತ್ತ ಬೆಳೆಯಬಹುದಾಗಿತ್ತು. ಆದರೆ ಹಸಿರು ಕ್ರಾಂತಿಯ ನಂತರ ಜನ ಪಾಲಿಶ್ ಮಾಡಿದ ಬಿಳಿ ವಿಷದತ್ತ (ಅಕ್ಕಿ) ಆಕರ್ಷಿತರಾಗಿ ಹಲವು ರೋಗಗಳಿಗೆ ಆಹ್ವಾನ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಕೆಂಪಕ್ಕಿ ಸಂತೆ ಆಯೋಜಿಸಲಾಗಿದ್ದು, ಮುಂದೆ ಬೇರೆ ಬೇರೆ ಭಾಗಗಳಲ್ಲಿ ಸಂತೆ ನಡೆಸಿ ಜನರಿಗೆ ಕೆಂಪಕ್ಕಿ ಮಹತ್ವ ತಿಳಿಸಲಾಗುವುದು' ಎಂದು ಸಂತೆಯ ಸಂಘಟಕ ಹಾಗೂ ಸಹಜ ಸಮೃದ್ಧ ಸಂಘಟನೆಯ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.