ADVERTISEMENT

ಜಿಟಿಟಿಸಿ ಕಿರುಕುಳ: ಸಮಗ್ರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಲಿಂಗಸುಗೂರ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ.)ದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಮಾನಸಿಕ, ದೈಹಿಕ ಮತ್ತಿತರ ಕಿರುಕುಳ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬುಧವಾರ ಆಗ್ರಹಿಸಿದೆ.

ಜಿಟಿಟಿಸಿ ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿ ಪವನಕುಮಾರ ಗುಳಿಗೆಗಳನ್ನು ನುಂಗಿ ಮತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ  ಹೈದರಾಬಾದ್‌ನ ಆಸ್ಪತ್ರೆಯಲ್ಲಿರುವ ಗಂಭೀರ ಸ್ಥಿತಿಯಲ್ಲಿರುವ ಅವರು ಶೀಘ್ರವೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿದ ಬಳಿಕ ಪ್ರತಿಭಟನಾ ರ‌್ಯಾಲಿ ಆರಂಭಿಸಲಾಯಿತು.
 
ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಯಿತು. ಪ್ರಾಚಾರ್ಯರನ್ನು ವಜಾಗೊಳಿಸಬೇಕು, ಅನನುಭವಿ ಉಪನ್ಯಾಸಕರನ್ನು ಬದಲಾವಣೆ ಮಾಡುವಂತೆ ಒತ್ತಾಯಿಸುವ ಕೂಗು ಕೇಳಿಸಿತು.

ಜಿಟಿಟಿಸಿ, ಡಿಪ್ಲೊಮಾ, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು  ಪ್ರತಿಭಟನೆಯನ್ನು ಬೆಂಬಲಿಸಿ ಪಾಲ್ಗೊಂಡಿದ್ದರು. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತ ಕಚೇರಿ ಶಿರಸ್ತೆದಾರ ರಾಚಪ್ಪ ಅವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ.) ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ ಪಾಟೀಲ ಅರ್ಪಿಸಿದರು.
 
ಈ ಕುರಿತು ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆ ನೇತೃತ್ವವನ್ನು ಶರಣಬಸವರಾಜ, ಶಿವಪ್ರಸಾದ, ಮಹೇಶ, ಮಂಜುನಾಥ, ನವೀನ ಪಾಟೀಲ, ಸಂಜಯಕುಮಾರ ಮತ್ತಿತರರು ವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.