ADVERTISEMENT

ಜಿಪಂ: ಕುಶಾಲ ಅಧ್ಯಕ್ಷ, ತಾನಾಜಿ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 19:15 IST
Last Updated 5 ಫೆಬ್ರುವರಿ 2011, 19:15 IST

ಬೀದರ್: ಸ್ಥಳೀಯ ಜಿಲ್ಲಾ ಪಂಚಾಯಿತಿ  ಮೊದಲ ಅವಧಿಗೆ ಅಧ್ಯಕ್ಷರಾಗಿ ಕುಶಾಲ ಪಾಟೀಲ್ ಗಾದಗಿ ಮತ್ತು ಉಪಾಧ್ಯಕ್ಷರಾಗಿ ತಾನಾಜಿ ಧನಸಿಂಗ್ ರಾಠೋಡ್ ಆಯ್ಕೆಯಾದರು.

 ಶನಿವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜನವಾಡ ಕ್ಷೇತ್ರದ ಬಿಜೆಪಿ ಸದಸ್ಯ ಕುಶಾಲ ಪಾಟೀಲ್ ಗಾದಗಿ ಹಾಗೂ ವಡಗಾಂವ್ (ಡಿ) ಕ್ಷೇತ್ರದ ಜೆಡಿಎಸ್ ಸದಸ್ಯ ವಸಂತ ಬಿರಾದಾರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಭಾಲ್ಕಿ ತಾಲ್ಲೂಕಿನ ನಿಟ್ಟೂರ (ಬಿ) ಕ್ಷೇತ್ರದ ಬಿಜೆಪಿ ಸದಸ್ಯ ತಾನಾಜಿ ಧನಸಿಂಗ್ ರಾಠೋಡ ಹಾಗೂ ಬಸವಕಲ್ಯಾಣ ತಾಲ್ಲೂಕು ಮಂಠಾಳ ಕ್ಷೇತ್ರದ ಪಕ್ಷೇತರ ಸದಸ್ಯ ಸಂಜು ಕಾಳೇಕರ್ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕುಶಾಲ ಪಾಟೀಲ್ 18 ಮತ ಪಡೆದು ಆಯ್ಕೆಯಾದರು.  ಜೆಡಿಎಸ್‌ನ ವಸಂತ ಬಿರಾದಾರ ಅವರಿಗೆ 10 ಮತಗಳು ಬಂದವು. ಈ ಪೈಕಿ ಜೆಡಿಎಸ್‌ನ 5, ಕಾಂಗ್ರೆಸ್ 2 ಮತ್ತು 3 ಜನ ಪಕ್ಷೇತರರು ಅವರ ಪರ ಮತ ಚಲಾಯಿಸಿದರು. ವೀರಣ್ಣ ಪಾಟೀಲ್ ಸೇರಿ ಹುಮನಾಬಾದ್ ತಾಲ್ಲೂಕಿನ ಮೂವರು ಸದಸ್ಯರು ಮತದಾನದಿಂದ ಹೊರಗುಳಿದರು.

 ಸಂಜು ಕಾಳೇಕರ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಉಪಾಧ್ಯಕ್ಷರಾಗಿ ತಾನಾಜಿ ರಾಠೋಡ್ ಅವಿರೋಧ ಆಯ್ಕೆಯಾದರು. ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅಧಿಕೃತವಾಗಿ ಪ್ರಕಟಿಸಿದರು.

 ಅಧ್ಕಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಘೋಷಿಸುತ್ತಲೇ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಜಿಪಂ ಕಚೇರಿ ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಗುಲಾಲ್ ಎರಚಿ ಸಂಭ್ರಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ್ ಬೆಳಮಗಿ ಮತ್ತಿತರರು ಸಿಹಿ ತಿನ್ನಿಸಿ ಶುಭ ಕೋರಿದರು. ನಂತರ ನಗರದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.