ADVERTISEMENT

ಜೀರ್ಣೋದ್ಧಾರಕ್ಕೆ ಕಾದಿದೆ ಈಶ್ವರ ದೇಗುಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:15 IST
Last Updated 14 ಫೆಬ್ರುವರಿ 2011, 8:15 IST

ನಾಪೋಕ್ಲು: ಸಮೀಪದ ಹೊದ್ದೂರು ಗ್ರಾಮದಲ್ಲಿ ಸುಮಾರು 500 ವರ್ಷಗಳ ಹಿಂದಿನ ಚರಿತ್ರೆ ಹೊಂದಿರುವ ದೈವನೆಲೆಯಾದ ಶಾಸ್ತಾವು ಈಶ್ವರ ದೇವಾಲಯದ ಪುನರ್ನಿರ್ಮಾಣ ಕಾರ್ಯವನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ದೇವಾಲಯದ ಜೀರ್ಣೋದ್ಧಾರ ಸಮಿತಿ ಸನ್ನದ್ಧವಾಗಿದೆ.

ಹೊದ್ದೂರು- ಕುಂಬಳದಾಳು ರಸ್ತೆಯಲ್ಲಿರುವ ದೇವರಕಾಡಿನಲ್ಲಿ 500 ವರ್ಷಗಳ ಹಿಂದೆ ನೆಲೆನಿಂತಿರುವ ಈ ದೇವಾಲಯವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿ ಶಾಸ್ತಾವು ಈಶ್ವರ ದೇವರು ಪ್ರಧಾನವಾಗಿ ನೆಲೆಸಿದ್ದು ಬಲಭಾಗದಲ್ಲಿ ಗಣಪತಿ ಎಡಭಾಗದಲ್ಲಿ ಸುಬ್ರಹ್ಮಣ್ಯ, ಚಾಮುಂಡಿ ಹಾಗೂ ಬೇಟೆ ಅಯ್ಯಪ್ಪ ದೇವರು ನೆಲೆಸಿದ್ದು ಸದ್ಯದಲ್ಲಿಯೇ ಈ ದೇವಾಲಯಗಳ ಪುನರ್ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಇಲ್ಲಿನ ಗ್ರಾಮದ ಜನರ ಅಭಿಪ್ರಾಯದ ಪ್ರಕಾರ ಹಿಂದೆ ಕೇರಳ ರಾಜ್ಯದಿಂದ ಶಾಸ್ತಾವು ದೇವರು ಆಗಮಿಸಿದರಂತೆ. ಹೊದ್ದೂರಿನ ಋಷಿಮುನಿಗಳ ತಾಣವಾದ ಪಟ್ರಂಡ ಬಾಣೆಯಲ್ಲಿ ಶಿವಲಿಂಗವನ್ನು ಗುಹೆಯೊಳಗೆ ಸ್ಥಾಪಿಸಿ ಅಲ್ಲಿ ಪೂಜೆ ಸಲ್ಲಿಸುತ್ತಿದ್ದರಂತೆ. ದೇವಾಲಯಕ್ಕೆ ಉತ್ತಮ ನೆಲೆ ಬೇಕೆಂಬ ಉದ್ದೇಶದಿಂದ ಈಗಿರುವ ಸ್ಥಳದಲ್ಲಿ ದೇವಾಲಯವನ್ನು ಸ್ಥಾಪಿಸಲಾಯಿತು.

ಪರವೂರಿನಿಂದ ಗ್ರಾಮದ ಸಂಪತ್ತನ್ನು ದೋಚಲು ಬಂದಂತಹ ಸಂದರ್ಭದಲ್ಲಿ ಊರಿನವರು ಹೆದರಿ ಪಲಾಯನ ಮಾಡಬೇಕಾಯಿತು. ಆ ಸಂದರ್ಭದಲ್ಲಿ ಜೇನುನೊಣದ ರೂಪದಲ್ಲಿ ಬಂದ ದೈವಿಕ ಶಕ್ತಿಗಳು ದರೋಡೆಕೋರರ ಮೇಲೆ ದಾಳಿ ಮಾಡಿ ಗ್ರಾಮದ ಜನರನ್ನು ರಕ್ಷಿಸಿ ಗ್ರಾಮ ರಕ್ಷಣೆ ಮಾಡಿದರಂತೆ. ದೇವಾಲಯದ ಪಕ್ಕದಲ್ಲಿಯೇ ಅಪರೂಪದ ಬಾವಿಯೊಂದಿದ್ದು ಬಾವಿಯಿಂದ ಋಷಿಮುನಿಗಳು ನಾಗನ ರೂಪದಲ್ಲಿ ನೀರು ತಂದು ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದರು. ವರ್ಷದಲ್ಲೊಂದು ದಿನ ಮಳೆಗಾಲದ ಆರಂಭದಲ್ಲಿ ಜೂನ್ 14ರಂದು ಈ ಬಾವಿಯ ನೀರು ಬತ್ತಿ ಹೋಗುವುದು ವಿಶೇಷ.

ಈ ದೇವಾಲಯದಲ್ಲಿ ಚಾಮುಂಡಿ ದೈವವನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಚಾಮುಂಡಿ ದೈವವನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ದೇವಾಲಯವು ಹೆಚ್ಚಿನ ಪಾವಿತ್ರ್ಯವನ್ನು ಹೊಂದಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಂದ ತಿಳಿದುಬಂದಿದೆ. ಹುತ್ತರಿ ಹಬ್ಬದ ಸಂದರ್ಭದಲ್ಲಿ ಎತ್ತುಪೋರಾಟ ಆಚರಣೆಯೊಂದಿಗೆ ಒಂದು ದಿನದ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು ಹಲವು ವರ್ಷಗಳ ಸಾಂಪ್ರದಾಯಿಕ ಆಚರಣೆ ನಡೆದುಬಂದಿದೆ.

ಇದೀಗ ದೇವಾಲಯವು ಶಿಥಿಲಾವಸ್ಥೆಗೆ ಬಂದಿರುವುದರಿಂದ ದೇವಾಲಯ ಜೀರ್ಣೋದ್ಧಾರ ಮಾಡಲು ಊರಿನ ಮಂದಿ ಮುಂದಾಗಿದ್ದಾರೆ. ಕೂಡಂಡ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ದೇವಾಲಯ ನಿರ್ಮಾಣ ಮಾಡಲಿರುವ ಸ್ಥಳವನ್ನು ಸಮ ತಟ್ಟು ಮಾಡಲಾಗಿದ್ದು, ನೀಲಿ ನಕ್ಷೆಯ ಪ್ರಕಾರ ದೇವಾಲಯ ನಿರ್ಮಾಣಗೊಳ್ಳಲಿದೆ. ಭಕ್ತಾದಿಗಳು ದೇವಾಲಯ ನಿರ್ಮಾಣಕ್ಕೆ ಧನ ಸಹಾಯಮಾಡಬೇಕೆಂದು ಕೂಡಂಡ ಪುರುಷೋತ್ತಮ್ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.