ADVERTISEMENT

ತೆಲುಗು ನಟ ಹರಿಕೃಷ್ಣ ಸ್ವಾಗತಕ್ಕೆ ಬೈಕ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಕಾರಟಗಿ: ತೆಲುಗು ನಟ, ರಾಜ್ಯಸಭಾ ಸದಸ್ಯ ನಂದಮೂರಿ ಹರಿಕೃಷ್ಣರನ್ನು ಬೈಕ್ ರ‌್ಯಾಲಿಯೊಂದಿಗೆ ಜಯಕಾರ ಹಾಕುತ್ತಾ, ತೆಲುಗು ದೇಶಂನ ಧ್ವಜ ಹಾರಾಡಿಸುತ್ತಾ ಅದ್ದೂರಿಯಾಗಿ ಭಾನುವಾರ ಸ್ವಾಗತಿಸಿಕೊಳ್ಳಲಾಯಿತು.

ಸಿಂಧನೂರಿನಿಂದ ಕಾರಟಗಿ ಮಾರ್ಗವಾಗಿ ಮರ್ಲಾನಹಳ್ಳಿಗೆ ತೆರಳಿದ ನಟ ಹರಿಕೃಷ್ಣಗೆ ದಾರಿಮಧ್ಯೆ ಕ್ಯಾಂಪ್‌ಗಳಲ್ಲಿ ಮಹಿಳೆಯರು ಆರತಿ ಮಾಡಿದರೆ, ಅಭಿಮಾನಿಗಳು ಹೂಮಾಲೆಯೊಂದಿಗೆ ಜಯಕಾರ ಹಾಕಿದರು.

ನೆಕ್ಕಂಟಿ ನಾಗರಾಜ್ ಮಾಲೀಕತ್ವದ ಚಾಂದನಿ ರೆಸಿಡೆನ್ಸಿ, ಶ್ರೀರಾಮಚಂದ್ರ ಪ್ಯಾಕಿಂಗ್ಸ್ ಘಟಕಗಳಿಗೆ ಚಾಲನೆ ನೀಡಿ ಮಾತನಾಡಿದ ನಂದಮೂರಿ ಹರಿಕೃಷ್ಣ, ಕರ್ನಾಟಕ, ಆಂಧ್ರದವರು ಬೇರೆಯಲ್ಲ. ಕನ್ನಡಿಗರ ಉದಾರತೆಯಿಂದ ಆಂಧ್ರದ ರೈತರು, ಮಹಿಳೆಯರು ಇಲ್ಲಿ ನೆಮ್ಮದಿಯಿಂದ ಇದ್ದಾರೆ. 1983ರಲ್ಲಿ ನಮ್ಮ ತಂದೆ ಎನ್.ಟಿ. ರಾಮರಾವ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಆಂಧ್ರ ಶಾಸಕರಿಗೆ ರಕ್ಷಣೆ, ಬೆಂಬಲ ನೀಡಿದ್ದನ್ನು ಸ್ಮರಿಸಿದರು.

  ಬೈಕ್ ರ‌್ಯಾಲಿಯಲ್ಲಿನ ಉತ್ಸಾಹವನ್ನು ಆಂಧ್ರದಲ್ಲಿ ತೆಲುಗುದೇಶಂ ಮತ್ತೆ ಅಧಿಕಾರಕ್ಕೆ ಬರುವಲ್ಲಿ ತೋರಿಸಿರಿ ಎಂದವರು ಕೋರಿದರು. ಉರವಕೊಂಡ ಶಾಸಕ ಪಯ್ಯಾವುಲ ಕೇಶವ್, ಬಳ್ಳಾರಿ ಗ್ರಾಮೀಣ ಶಾಸಕ ಬಿ. ಶ್ರೀರಾಮುಲು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ತೆಲುಗು ಚಿತ್ರನಟಿ ಕವಿತಾ ಮಾತನಾಡಿದರು.

ಉದ್ಯಮಿ ನೆಕ್ಕಂಟಿ ನಾಗರಾಜ್, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ಯ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ಶ್ರೀ ಜಿ. ವೀರಪ್ಪ ಕೆಸರಹಟ್ಟಿ, ಜಿಪಂ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಲಾ ಶೇಷಗಿರಿರಾವ್, ಬಿಲ್ಗಾರ್ ನಾಗರಾಜ್, ಕರಿಯಪ್ಪ ಸಿಂಧನೂರ ಉಪಸ್ಥಿತರಿದ್ದರು.

ಲಿಂಗಾರಡ್ಡಿ ಆಲೂರ, ತೆಲುಗು ಚಿತ್ರತಾರೆಗಳಾದ ಸಾಯಿಕಿರಣ, ಮಮತಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.