ADVERTISEMENT

ದಲಿತರು ದೇಶ ಆಳುವ ಸಮಾಜವಾಗಿ ಮಾರ್ಪಡಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST

ಚಿಕ್ಕಮಗಳೂರು: ಬಹುಜನರು ಚುನಾವಣೆಯನ್ನು ಯುದ್ಧೋಪಾದಿಯಲ್ಲಿ ಸ್ವೀಕರಿಸಬೇಕೆಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪಿ.ವೇಲಾಯುಧನ್ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬಿ.ಕೃಷ್ಣಪ್ಪ ಅವರ 74ನೇ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿ, ದಲಿತರು ದೇಶ ಮತ್ತು ರಾಜ್ಯ ಆಳುವ ಸಮಾಜವಾಗಿ ಮಾರ್ಪಾಡಾಗಬೇಕೆಂದು ಸಲಹೆ ನೀಡಿದರು.

ದಲಿತ ಜನಾಂಗದ ಯುವಕರು ದಾರಿ ತಪ್ಪುತ್ತಿರುವುದನ್ನು ನಿಯಂತ್ರಿಸಬೇಕು. ದಲಿತರು ಶೋಷಣೆಯಿಂದ ಮುಕ್ತರನ್ನಾಗಿಸುವತ್ತ ಹೆಜ್ಜೆ ಹಾಕುವಂತೆ ನೋಡಿಕೊಳ್ಳಬೇಕು. ಕೃಷ್ಣಪ್ಪ ಅವರು ದಲಿತರ ವಿಮೋಚನೆಗೆ ಚಿಂತಿಸಿ, ದಲಿತ ಚಳವಳಿಯನ್ನು ರಾಜ್ಯದಲ್ಲಿ ಮುನ್ನಡೆಸಿದರು ಎಂದು ಹೇಳಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಗೋಪಾಲ್ ಮಾತನಾಡಿ, ದಲಿತ ಚಳವಳಿಯನ್ನು ರಾಜ್ಯದಲ್ಲಿ ಹಬ್ಬಿಸಿದ ಕೀರ್ತಿ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ. ಶೋಷಣೆಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕೆಂದು ತಿಳಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಮಾತನಾಡಿದರು.

ಜೆಡಿಎಸ್ ಮುಖಂಡ ಹಂಪಯ್ಯ, ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಮುಖಂಡ ಜಿ.ಕೆ.ಬಸವರಾಜು, ಜಿಲ್ಲಾ ಮುಖಂಡರಾದ ಈಶ್ವರ, ಕೆ.ಆರ್.ಗಂಗಾಧರ, ಹರೀಶ್, ರೈತ ಸಂಘದ ಆರ್.ಆರ್.ಮಹೇಶ್ ಇದ್ದರು.

ಸರಳ ವಿವಾಹ: ಇದೇ ಸಮಾರಂಭದಲ್ಲಿ ಕಬ್ಬಿಗೆರೆಯ ಮೋಹನ್‌ಕುಮಾರ್ ಮತ್ತು ಮಾಗಡಿ ಗ್ರಾಮದ ಭಾರತಿ ಅವರು ಹಾರ ಬದಲಾಯಿಸಿ ಕೊಳ್ಳುವ ಮೂಲಕ ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.